ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು 05: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ ಸಂಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ‌.

ಲೋಕಾಯಕ್ತ ಎಸ್‌ಐಟಿ ವಿಭಾಗದ ಮುಖ್ಯಸ್ಥ, ಎಡಿಜಿಪಿ ಚಂದ್ರಶೇಖರ್ ಅವರು ದಾಖಲಿಸಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ದಾಖಲಾಗಿದ್ದು, ಈ ಹಿಂದೆ ಚಂದ್ರಶೇಖರ್ ನೀಡಿದ ದೂರು ಆಧರಿಸಿ ಎನ್‌ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಈಗ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ‌.

ಕುಮಾರಸ್ವಾಮಿ ಅವರು ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪ ಮಾಡಿದ್ದರು. ಬೆದರಿಕೆ ಹಾಕಿದ್ದರು. ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಬೆದರಿಸಿದ್ದರು. ನನ್ನ ಕುಟುಂಬದ ವಿರುದ್ಧವೂ ಸುಳ್ಳು ಆಪಾದನೆ ಮಾಡಿದ್ದರು ಎಂದು ಚಂದ್ರಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.