ಬೆಳಗಾವಿಯಲ್ಲಿ ನ.14 ರಿಂದ ಮೈಸೂರು ದಸರಾ ವಸ್ತು ಪ್ರದರ್ಶನ ಮಾದರಿಯಲ್ಲಿ ವಸ್ತುಪ್ರದರ್ಶನ

ಬೆಳಗಾವಿಯಲ್ಲಿ ನ.14 ರಿಂದ ಮೈಸೂರು ದಸರಾ ವಸ್ತು ಪ್ರದರ್ಶನ ಮಾದರಿಯಲ್ಲಿ  ವಸ್ತುಪ್ರದರ್ಶನ Exhibition on the model of Mysore Dasara exhibition to be held in Belgaum from November 14

ಕರ್ನಾಟಕ ವಸ್ತು ಪ್ರದರ್ಶನ ಕಾರ್ಯಕ್ರಮ ವೀಡಿಯೋ ಸಂವಾದ ಸಭೆ 

ಬೆಳಗಾವಿ   25: ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಮೈಸೂರು ದಸರಾ ಸಂದರ್ಭದಲ್ಲಿ ಆಯೋಸಲಾಗುವ ವಸ್ತು ಪ್ರದರ್ಶನದಂತೆ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗುತ್ತಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಅವರು ತಿಳಿಸಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಜೂ.25) ಜರುಗಿದ ವಸ್ತು ಪ್ರದರ್ಶನ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಈ ವಸ್ತು ಪ್ರದರ್ಶನದಲ್ಲಿ ರಾಜ್ಯ ಸರಕಾರದ ಸಾಧನೆಗಳನ್ನು ಬಿಂಬಿಸುವ  ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ರಾಜ್ಯ ಸರಕಾರ ಜನ ಸಾಮಾನ್ಯರ ಅಭ್ಯುದಯಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳ ಪರಿಣಾಮಕಾರಿಯಾಗಿ ಪ್ರಚಾರ ನೀಡುವುದರ ಮೂಲಕ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎನ್ನುವುದು ಈ ವಸ್ತು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದರು.  

ಮೊದಲ ಹಂತದಲ್ಲಿ ಬೆಳಗಾವಿ, ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಆಯೋಜಿಸಲಾಗುತ್ತಿದ್ದು, ಬೆಳಗಾವಿಯಲ್ಲಿ ನವೆಂಬರ 14 ರಿಂದ ಡಿಸೆಂಬರ್ 31ರ ವರಗೆ ನಗರದ ಸಿ.ಪಿ.ಎಡ್‌. ಮೈದಾನದಲ್ಲಿ ವಸ್ತು ಪ್ರದರ್ಶನ ಆಯೋಜಿಸಲು ಉದ್ದೇಶಿಸಲಾಗಿದೆ. ಈ ವಸ್ತು ಪ್ರದರ್ಶನದಲ್ಲಿ ಎಲ್ಲ ಇಲಾಖೆಗಳು ತಮ್ಮ ಇಲಾಖೆಯಲ್ಲಿ ಜಾರಿಯಲ್ಲಿರುವಂತಹ ಜನಪರ ಯೋಜನೆಗಳ ಕುರಿತು  ವಸ್ತು ಪ್ರದರ್ಶನ ಕೈಗೊಳ್ಳಬೇಕು ಇದಕ್ಕಾಗಿ ಅಗತ್ಯದ ಅನುದಾನವನ್ನು ತಮ್ಮ ಇಲಾಖೆಯಿಂದ  ಬಿಡುಗಡೆಗೊಳಿಸಿಕೊಳ್ಳುವದರ ಜೊತೆಗೆ ಮಳಿಗೆ ಸ್ಥಾಪಿಸಲು ಸ್ಥಳಾವಕಾಶಕ್ಕಾಗಿ  ಪ್ರಾಧಿಕಾರಕ್ಕೆ ಮುಂಚಿತವಾಗಿ ತಿಳಿಸಬೇಕು.  

ವಸ್ತು ಪ್ರದರ್ಶನ ಯಶಸ್ವಿಯಾಗಿ ಪೋಲಿಸ್, ಹೆಸ್ಕಾಂ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದು ಅಧ್ಯಕ್ಷರಾದ ಅಯೂಬ್ ಖಾನ್ ಅವರು ತಿಳಿಸಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಮೈಸೂರು ಪ್ರಾಧಿಕಾರದ ವತಿಯಿಂದ ಇದೇ ಮೊದಲ ಬಾರಿಗೆ ವಸ್ತು ಪ್ರದರ್ಶನ ಕೈಗೊಳ್ಳಲಾಗುತ್ತಿದ್ದು. ಈ ವಸ್ತು ಪ್ರದರ್ಶನವನ್ನು ಯಶಸ್ವಿಗೊಳಿಸಲು ಎಲ್ಲ ಇಲಾಖೆಗಳು ಸಹಕರಿಸಬೇಕು ಎಂದು ತಿಳಿಸಿದರು.  

ಈ ಕಾರ್ಯಕ್ರಮಕ್ಕೆ ಮುಖ್ಯವಾಗಿ ಯೋಜನೆಗಳ ಪ್ರಕಾರ ಮಳಿಗೆ ಸ್ಥಾಪನೆಗೆ ಮುಂದಾಗಬೇಕು. ಇದಕ್ಕಾಗಿ ಉಪ ಸಮಿತಿಗಳನ್ನು ರಚಿಸಿ ಸರಕಾರದ ಮುಖ್ಯ ಯೋಜನೆಗಳ ಸವಿವರವಾದ ಮಾಹಿತಿ ಅನ್ವಯ ವಸ್ತು ಪ್ರದರ್ಶನ ಮಳಿಗೆ ಸ್ಥಾಪನೆಗೆ ಕ್ರಿಯಾಯೊಜನೆ ರೂಪಿಸಬೇಕು ಎಂದು ತಿಳಿಸಿದರು.  

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು. ವಸ್ತು ಪ್ರದರ್ಶನದ ಒಳಾಂಗಣ, ಹಾಗೂ ಸುಗಮ ಪ್ರವೇಶ ಹಾಗೂ ನಿರ್ಗಮನದ ಕುರಿತು ರೂಪು ರೇಷೆಗಳನ್ನು ಸಿದ್ಧಪಡಿಸಬೇಕು. ವಸ್ತು ಪ್ರದರ್ಶನವು ಚಳಿಗಾಲದ ಅಧಿವೇಶನದ ಸಮಯದಲ್ಲಿ ಆಯೋಜಿಸಲಾಗುತ್ತಿದ್ದು ಇದಕ್ಕೆ ಬೇಕಾದಂತಹ ಪೋಲಿಸ್ ಬಂದೊಬಸ್ತಗಾಗಿ ಮುಂಚಿತವಾಗಿ ತಿಳಿಸಬೇಕು.  

ಇಲಾಖೆಗಳು ತಮ್ಮ ಇಲಾಖೆಯಿಂದ ಜಾರಿಯಲ್ಲಿರುವ ಯೋಜನೆಗಳ ಸವಿಸ್ತಾರತವಾದ ಮಾಹಿತಿಯನ್ನು ಒದಗಿಸಬೇಕು. ಪ್ರಸಕ್ತ ಸಾಲಿನಲ್ಲಿ  ಗಾಂಧೀ ಭಾರತ ಕಾರ್ಯಕ್ರಮವನ್ನು ವರ್ಷವೀಡಿ ಆಚರಿಸಲಾಗುತ್ತಿದ್ದು ಗಾಂಧಿ ಭಾರತ ಹಾಗೂ ಜೈ ಭೀಮ, ಜೈ ಬಾಪು, ಜೈ ಸಂವಿಧಾನ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಳಿಗೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ  ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.  

ಸಭೆಯಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುದ್ರೇಶ, ಜಂಟಿ ಕೃಷಿನಿರ್ದೆಶಕ ಎಚ್‌.ಡಿ.ಕೋಳೆಕರ, ಜಿ.ಪಂ ಯೋಜನಾ ನಿರ್ದೆಶಕ ರವಿ ಬಂಗಾರ​‍್ಪನವರ, ಪ್ರವಾಸೊದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.