ವಿಜಯಪುರ ಜಿಲ್ಲೆಗೆ ಪೂರ್ಣ ಪ್ರಮಾಣದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಿ: ಮಲ್ಲಿಕಾರ್ಜುನ ಬಟಗಿ

ವಿಜಯಪುರ ಜಿಲ್ಲೆಗೆ ಪೂರ್ಣ ಪ್ರಮಾಣದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಿ: ಮಲ್ಲಿಕಾರ್ಜುನ ಬಟಗಿ Establish a full-fledged medical college in Vijayapura district: Mallikarjuna Batagi

ವಿಜಯಪುರ   26:   ಪೂರ್ಣಪ್ರಮಾಣದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮಂಜೂರು ಹಾಗೂ ರಾಜ್ಯದಲ್ಲಿರುವ ಡೀಮ್ಡ್‌ ವಿಶ್ವವಿದ್ಯಾಲಯ ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದಿಂದ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಆರೋಗ್ಯ ಸಚಿವರು, ಉಪಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಸಚಿವರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಅಖೀಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಟಗಿ ಅವರು ಮಾತನಾಡಿ, ವಿಜಯಪುರ ಜಿಲ್ಲಾಸ್ಪತ್ರೆಯು ಸುಮಾರು 149 ಎಕರೆಯ ವಿಸ್ತೀರ್ಣದ ವಿಶಾಲ ಜಮೀನು ಹೊಂದಿದ್ದು ಆಸ್ಪತ್ರೆಯ ಆವರಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ , ಟ್ರಾಮಾ ಸೆಂಟರ್, ಡಿಪ್ಲೋಮಾ ಹಾಗೂ ಬಿಎಸ್ಸಿ ನರ್ಸಿಂಗ ಕಾಲೇಜುಗಳು, ಆಯುರ್ವೆದಿಕ ಆಸ್ಪತ್ರೆ ಹೊಂದಿರುವ ರಾಜ್ಯದ ದೇಶದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುತ್ತದೆ.  

ವಿಜಯಪುರ ಜಿಲ್ಲೆಗೆ ಹಲವು ದಶಕಗಳಿಂದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮಂಜೂರು ಮಾಡಬೇಕೆಂದು ಬೇಡಿಕೆ ಇದ್ದರೂ ಕೂಡ ರಾಜ್ಯ ಸರ್ಕಾರ ಖಾಸಗಿದವರ ಒತ್ತಡಕ್ಕೆ ಮಣಿದು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲು ಮುಂದಾಗಿರುವುದು ಖಂಡನೀಯವಾದುದು ಕೂಡಲೇ ವಿಜಯಪುರ ಜಿಲ್ಲೆಗೆ ಪೂರ್ಣ ಪ್ರಮಾಣದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಬೇಕೆಂದರು.  

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಪಿಪಿಪಿ ಮಾದರಿಯ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಬಡಜನರ ಆರೋಗ್ಯ ರಕ್ಷಣೆಯ ಹಕ್ಕು ಹಾಗೂ ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಹಕ್ಕನ್ನು ಕಸಿದುಕೊಡಂತಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಇರುವ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳು ಬಡ ಜನರ ರಕ್ತ ಹೀರುತ್ತಿವೆ.  ಪಿಪಿಪಿ ಮಾದರಿ ಎನ್ನುವುದು ಮೆಡಿಕಲ್ ಮಾಫಿಯಾ ಆಗಿದ್ದು, ಇದೊಂದು ಬಡಜನರ ವಿರೋಧಿ  ತಂತ್ರವಾಗಿದೆ. ಜೊತೆಗೆ ಡೀಮ್ಡ್‌ ವಿಶ್ವವಿದ್ಯಾಲಯ ಹೊಂದಿರುವ ಸಂಸ್ಥೆಗಳು ಅಪರಮಿತ ಅಧಿಕಾರ ಹೊಂದಿದ್ದು ಇವುಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ರಾಜ್ಯದಲ್ಲಿರುವ ಡೀಮ್ಡ್‌ ಯುನಿವರ್ಸಿಟಿ ಕಾಯ್ದೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಇನ್ನೋರ್ವ ಮುಖಂಡ ಜಗದೇವ ಸೂರ್ಯವಂಶಿ ಮಾತನಾಡಿ, ರಾಜ್ಯದಲ್ಲಿ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಹಾಗೂ ಬಡವರಿಗೆ ವೈದ್ಯಕೀಯ ಸೇವೆ ನೀಡಲು ವಿಫಲವಾಗಿರುವ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಸಂಪೂರ್ಣ ವೈದ್ಯಕೀಯ ಶಿಕ್ಷಣವನ್ನು ಸರ್ಕಾರೀಕರಣ ಮಾಡಬೇಕು. ಈ ಮೂಲಕ ವೈದ್ಯಕೀಯ ಶಿಕ್ಷಣ ನಡುವ ಹಕ್ಕನ್ನು ತನ್ನ ಬಳಿಯಲ್ಲಿಯೇ ಸರಕಾರ ಇರಿಸಿಕೊಳ್ಳಬೇಕೆಂದು ಒತ್ತಾಯಿಸಿದರು.