ಬೆಂಗಳೂರು, ಮೇ 8,ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ (ಮನ್ರೇಗಾ) ಯೋಜನೆಯಡಿ ಜಾಬ್ ಕಾರ್ಡ್ ವಿತರಣೆ ಮತ್ತು ಕೂಲಿ ಹಣ ಪಾವತಿ ಬಗ್ಗೆ ಮಾನ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಆರೋಪಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.ಪ್ರತೀ ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ನೀಡುತ್ತಿದ್ದು, ಈ ಕಾರ್ಡ್‌ನಲ್ಲಿ 18 ವರ್ಷ ಮೀರಿದ ಆ ಕುಟುಂಬದ ಎಲ್ಲಾ ಸದಸ್ಯರ ಹೆಸರು ನಮೂದಿಸಲಾಗಿರುತ್ತದೆ. ಎಲ್ಲರೂ ಸಹ ಮನ್ರೆಗಾ ಯೋಜನೆಯಡಿ ಕಾಮಗಾರಿಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಏಪ್ರಿಲ್ 1, 2020ರಿಂದ ಇದುವರೆಗೆ 40,745 ಹೆಚ್ಚುವರಿ ಜಾಬ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಮನ್ರೆಗಾ ಯೋಜನೆಯಡಿಯಲ್ಲಿ ಕಾರ್ಮಿಕರಾಗಿ ಕೂಡಲೇ ನೋಂದಾಯಿಸಿಕೊಳ್ಳಲು ಎಲ್ಲಾ ಅರ್ಹರಿಗೂ ಅವಕಾಶ ಕಲ್ಪಿಸಲು ಏಪ್ರಿಲ್ 30, 2020ರಂದು ಕಾಯಕ ಮಿತ್ರ ಮೊಬೈಲ್ ಆಪ್ ಬಿಡುಗಡೆ ಮಾಡಲಾಗಿದೆ. ಮನ್ರೆಗಾ ಯೋಜನೆಯಡಿ ಕೂಲಿ ಹಣ ಪಾವತಿಸಲು ನಿಯಮಗಳಲ್ಲಿರು ವಂತೆ ಕೆಲಸ ಮಾಡಿದ 15 ದಿನಗಳ ಒಳಗೆ ಕಾಲಾವಕಾಶವಿರುತ್ತದೆ. ಎನ್ಎಂಆರ್ ಮುಕ್ತಾಯ ಗೊಳಿಸಿದ ಶೇ. 99.07 ಪ್ರಕರಣಗಳಲ್ಲಿ 8 ದಿನಗಳೊಳಗೆ ಕೂಲಿ ಹಣವನ್ನು ಪಾವತಿಸಲಾಗಿರುತ್ತದೆ. ಶೇ.0.87 ಪ್ರಕರಣಗಳಲ್ಲಿ ಕೂಲಿ ಹಣ ಪಾವತಿಸಲು 9-15 ದಿನಗಳ ಕಾಲಾವಕಾಶವನ್ನು ತೆಗೆದುಕೊಳ್ಳಲಾಗಿರುತ್ತದೆ. ಶೇ.0.06 ಪ್ರಕರಣಗಳಲ್ಲಿ ಮಾತ್ರ 15 ದಿನಗಳಿಗಿಂತ ಹೆಚ್ಚಿನ ವಿಳಂಬವಾಗಿದೆ. ಮನ್ರೇಗಾ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಪ್ರಸ್ತುತ 45,499 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಪ್ರತಿ ಕುಟುಂಬದ ಎಲ್ಲ ಸದಸ್ಯರಿಗೂ ಜಾಬ್ ಕಾರ್ಡ್ ನೀಡುವಂತೆ ತಿಳಿಸಲಾಗಿದ್ದು, ಕುಟುಂಬಕ್ಕೆ ಒಂದು ಕಾರ್ಡ ನೀಡಲಾಗುತ್ತದೆ (ಪಡಿತರ ಕಾರ್ಡ್ ಮಾದರಿ) ಅದೇ ಕಾರ್ಡ್‌ನಲ್ಲಿ ಆ ಕುಟುಂಬದ 18 ವರ್ಷ ಮೇಲ್ಪಟ್ಟ ಎಲ್ಲ ಸದಸ್ಯರಿಗೂ ಅದರಲ್ಲಿ ಉದ್ಯೋಗ ಪಡೆಯುವ ಅವಕಾಶ ಮಾಡಿಕೊಡಲಾಗಿದೆ. ಜಾಬ್ ಕಾರ್ಡನ್ನು ಆದಾಯ ತೆರಿಗೆ ಪಾವತಿದಾರರಿಗೆ, ಸರ್ಕಾರಿ ನೌಕರರಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನೀಡಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ರಾಜ್ಯದಲ್ಲಿ ಯಾವ ಗ್ರಾಮ ಪಂಚಾಯತ್ ನಲ್ಲಾದರೂ ಹಾಗೆ ಆಗಿದ್ದರೆ, ಅಧಿಕಾರಿ ಉದ್ಧಟತನದಿಂದ ಒಂದು ಕುಟುಂಬಕ್ಕೆ ಒಂದೇ ಜಾಬ್ ಕಾರ್ಡ್ ಅಂತ ಉಳಿದವರಿಗೆ ಕಾರ್ಡ್ ನೀಡದೇ ಹೋದರೆ ಆ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಎಸ್.ಈಶ್ವರಪ್ಪನವರು ಭರವಸೆ ನೀಡಿದ್ದರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಿನ್ನೆ ಟ್ವೀಟರ್ ನಲ್ಲಿ ಈ ಬಗ್ಗೆ ಆರೋಪ ಮಾಡಿದ್ದರು. ಆದ್ದರಿಂದ ಸಚಿವರು ಇಂದು ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.