ಬೀಳಗಿ 09: ಸರಿಸಮಾನ ಸಮಾಜ ಕಟ್ಟಲು ಬುದ್ಧ, ಬಸವ, ಅಂಬೇಡ್ಕರ್ ಶ್ರಮಿಸಿದ ಮಹಾನುಭಾವರು. ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರರ ಧ್ಯೇಯ ವಾಕ್ಯಗಳಾಗಿವೆ. ಸಂವಿಧಾನದತ್ತವಾದ ಹಕ್ಕು ಪಡೆದು ಹತ್ತು ವರ್ಷಗಳಲ್ಲಿ ಶಿಕ್ಷಣ ಪಡೆದು ಮುಂಚೂಣಿಗೆ ಬರಲು ತಿಳಿಸಿದ್ದರು. ಆದರೆ 70 ವರ್ಷವಾದರೂ ಸಾಧ್ಯವಾಗಿಲ್ಲ ಎಂದು ಶಾಸಕ ಜೆ ಟಿ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಕೊರ್ತಿ ಸಮುದಾಯ ಭವನದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ, ಜಿಲ್ಲಾ ಸಮಿತಿ ಬಾಗಲಕೋಟೆ ಇವರ ಆಶ್ರಯದಲ್ಲಿ ಹಮಮಿಕೊಳ್ಳಲಾಗಿದ್ದ ಸಂವಿಧಾನ ಓದು, ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ವಿದ್ಯೆ ಮತ್ತು ಜ್ಞಾನ ಬಹಳ ಮುಖ್ಯ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕು. ಜಾಗೃತರಾಗಬೇಕು. ಎಲ್ಲ ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದಾರೆ. ಅವರೆಲ್ಲರೂ ಮೊದಲು ವಿದ್ಯಾವಂತರಾಗಿ, ಪ್ರಜ್ಞಾವಂತರಾಗಬೇಕು. ಸ್ಲೋಗನ್ ಹೇಳುವುದು, ಧ್ವಜ ಕೈಯಲ್ಲಿ ಹಿಡಿದ ಮಾತ್ರಕ್ಕೆ ಸರಿಸಮಾನರಾಗಲು ಸಾಧ್ಯವಿಲ್ಲ. ಗುಣಮಟ್ಟದ ಮೌಲ್ಯಯುತವಾದ ಉನ್ನತ ಶಿಕ್ಷಣ ಪಡೆದಾಗ ಮಾತ್ರ ಸರಿಸಮಾನವಾಗಿ ಬೆಳೆಯಲು ಸಾಧ್ಯ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಡಾ. ಎಸ್ ಎಚ್ ತೆಕ್ಕೆನ್ನವರ ಮಾತನಾಡಿ, ಸಚಿವ ಸತೀಶ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಲು, ಸಂವಿಧಾನ ಉಳಿವಿಗಾಗಿ ಶ್ರಮಿಸುತ್ತಿರುವರು. ಸಂವಿಧಾನದ ಆಶೋತ್ತರಗಳನ್ನು ತಿಳಿದುಕೊಂಡು ಪ್ರಜಾಪ್ರಭುತ್ವದ ಸಮಾನತೆ, ಏಕತೆ, ಬ್ರಾತೃತ್ವ, ರಾಜಕೀಯ ಪ್ರಾತಿನಿಧ್ಯ ಮುಂತಾದವುಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಡಿಎಸ್‌ಎಸ್ ಬೆಳಗಾವಿ ವಿಭಾಗಿ ಅಧ್ಯಕ್ಷ ಮಹಾದೇವ ಹಾದಿಮನಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಜಗತ್ತಿನಲ್ಲಿ ದೊಡ್ಡದಾದ ಸಂವಿಧಾನ ದೇಶಕ್ಕೆ ಕೊಟ್ಟು, ಭಾರತ ದೇಶದ ಪ್ರಜಾಪ್ರಭುತ್ವ, ಸಾರ್ವಭೌಮತೆ, ಐಕ್ಯತೆಯನ್ನು ಕಾಪಾಡಲಿಕ್ಕೆ ಅತ್ಯಂತ ಉಪಯುಕ್ತವಾದ ಸಂವಿಧಾನ ಜೊತೆಗೆ ಮಹಾತ್ಮಾ ಗಾಂಧಿಯವರ ಆದರ್ಶಗಳು, ಗೌತಮ ಬುದ್ಧರ ವೈಜ್ಞಾನಿಕ ಚಿಂತನೆ, ಬಸವೇಶ್ವರರ ವಚನ ಸಾಹಿತ್ಯದ ಆಚಾರಗಳು ಕೂಡ ದೇಶಕ್ಕೆ ಅತ್ಯಂತ ಅವಶ್ಯಕವಾಗಿವೆ ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಶ್ರೀಶೈಲ ಅಂಟಿನ ಮಾತನಾಡಿ, ಮೌಢ್ಯಗಳನ್ನು ಹೋಗಲಾಡಿಸಲು ಸಚಿವ ಸತೀಶ ಜಾರಕಿಹೊಳಿಯವರು ಮಾನವ ಬಂಧುತ್ವ ವೇದಿಕೆ ಮೂಲಕ ಪ್ರಯತ್ನಿಸುತ್ತಿರುವರು ಎಂದು ತಿಳಿಸಿದರು.
ಸಂಪತ್ ಲಮಾಣಿ ಸಂವಿಧಾನ ಪೀಠಿಕೆ ಬೋಧಿಸಿದರು. ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ರವಿ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಅಣವೀರಯ್ಯ ಪ್ಯಾಟಿಮಠ, ಸಿದ್ದು ಸಾರಾವರಿ, ಬಸವರಾಜ ಹಳ್ಳದಮನಿ, ಅಶೋಕ ಭೂಸರಡ್ಡಿ ಮತ್ತಿತರಿದ್ದರು.