ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ Environmental protection is the responsibility of citizens: Prakash Vaddara

        ವಿಜಯಪುರ   05:  ಕಳೆದ ವರ್ಷ ಬಿಸಿಲಿನ ತಾಪಕ್ಕೆ ಒಣಗಿದ್ದ ಜಿಲ್ಲಾ ಪಂಚಾಯತಿ ಆವರಣ ಇಂದು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಪ್ರಕೃತಿ ಪ್ರೇಮಿಗಳಿಗೆ ಹೊಸ ಆಶಾಭಾವನೆ ಮೂಡಿಸಿದೆ. ನಿರಂತರ ಹಸೀರೀಕರಣ ಕಾರ್ಯಗಳ ಫಲವಾಗಿ ರೂಪುಗೊಂಡಿರುವ ಈ ಪರಿಸರದಲ್ಲಿ ಇಂದು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 

ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ  ಪ್ರಕಾಶ ವಡ್ಡರ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ ಹಾಗೂ ಯೋಜನಾ ನಿರ್ದೇಶಕರಾದ ಅಶೋಕ ಕಲಘಟಗಿ ಅವರ ನೇತೃತ್ವದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ನ ಉಪ ಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ ಅವರು, "ಪ್ರಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪರಿಸರ ಸಂರಕ್ಷಣೆಯು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಒಂದು ಸಸಿ ನೆಡುವುದಕ್ಕಿಂತ ಅದನ್ನು ಮರವಾಗಿ ಬೆಳೆಸುವ ಸಂಕಲ್ಪ ಮುಖ್ಯವಾಗಿದೆ. ಹಸಿರು ಪರಿಸರವೇ ಆರೋಗ್ಯಕರ ಸಮಾಜದ ಅಡಿಪಾಯ ಎಂದರು.

        ಕಳೆದ ವರ್ಷ ನಮ್ಮ ಜಿಲ್ಲಾ ಪಂಚಾಯತಿ ಆವರಣ ಒಣಗಿದ ಬಯಲು ಪ್ರದೇಶದಂತಿತ್ತು. ಆದರೆ ಇಂದು, ಒಂದು ಸಲ ಕಣ್ಣು ಹಾಯಿಸಿದರೆ ಸಾಕು, ಮಲೆನಾಡಿನ ಸೊಬಗನ್ನು ನೆನಪಿಸುವಂತೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಹಸಿರಿನ ಹೊದಿಕೆ ಹೊದ್ದು ಮಲೆನಾಡಿನ ಸೊಬಗನ್ನು ಮೆಲುಕು ಹಾಕುವಂತೆ ನಳನಳಿಸುತ್ತಿದೆ. ಈ ಹಸಿರು ಕ್ರಾಂತಿಯ ಹಿಂದೆ ದೂರದೃಷ್ಟಿಯ ನಾಯಕತ್ವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರಿಗೆ ಸಲ್ಲಬೇಕು ಎಂದರು. 

ಸ್ವಚ್ಛ ಶನಿವಾರ ಅಭಿಯಾನದಡಿ ಜಿಲ್ಲಾ  ಪಂಚಾಯಿತಿ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ ಎಂದ ಅವರು, ಭವಿಷ್ಯದ ದಿನಗಳಲ್ಲೂ ಹಸಿರು ಬೆಳೆಸೋಣ, ಪ್ರಕೃತಿಯನ್ನು ಉಳಿಸೋಣ... ಮುಂದಿನ ಪೀಳಿಗೆಗೆ ಸುಂದರ ಭವಿಷ್ಯ ಕಟ್ಟೋಣ." ಎಂದರು. ಜಿ.ಪಂ.ನ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಅವರು ಮಾತನಾಡಿ, ಪರಿಸರ ಉಳಿದರೆ ಮಾತ್ರ ಮಾನವ ಜೀವನ ಸುರಕ್ಷಿತವಾಗಿರಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು. 

ಜಿ.ಪಂ.ನ ಯೋಜನಾ ನಿರ್ದೇಶಕರಾದ ಅಶೋಕ ಕಲಘಟಗಿ ರವರು ಮಾತನಾಡಿ, "ಕಳೆದ ವರ್ಷದಿಂದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಹಸೀರೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಅದರ ಪರಿಣಾಮವಾಗಿ ಇಂದು ಆವರಣವು ಹಸಿರು ಸಿರಿಯಿಂದ ಕಂಗೊಳಿಸುತ್ತಿದೆ. ಈ ಬದಲಾವಣೆ ಪರಿಸರದ ಬಗ್ಗೆ ಕಾಳಜಿ ಮತ್ತು ನಿರಂತರ ಪ್ರಯತ್ನಗಳ ಪ್ರತಿಫಲವಾಗಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು" ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು.