ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಮುಖ್ಯ ಶಿಕ್ಷಕ ಗಡೇದ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಮುಖ್ಯ ಶಿಕ್ಷಕ ಗಡೇದ  Environmental protection is everyone's responsibility: Headmaster Gaded

ತಾಳಿಕೋಟಿ  22: ಪ್ರಕೃತಿ ಮನುಷ್ಯನ ಜೀವನಕ್ಕೆ ಏನ್ನೆಲ್ಲ ಕೊಟ್ಟಿಲ್ಲ ಅಂತಹದರಲ್ಲಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೇದುರೆ ನಡೆಯಲಿದೆ. ಇದು ನಡೆಯಬಾರದೆಂದಾರೆ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಅದರಲ್ಲಿಯೂ ಯುವಕರ ಪಾತ್ರ ಮುಖ್ಯವಾಗಿದೆ ಎಂದು ಹುಣಶ್ಯಾಳ ಸರಕಾರಿ ಉರ್ದು ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶರಣಬಸಪ್ಪ ಸಿ. ಗಡೇದ ಹೇಳಿದರು. ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಮೊದಲ ದಿನದ ಉಪನ್ಯಾಸ ವೇದಿಕೆಯಲ್ಲಿ "ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ" ಕುರಿತು ಮಾತನಾಡಿ ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ವೀ.ವಿ.ಸಂಘದ ನಿರ್ದೇಶಕ ಎಂ.ಆರ್‌.ಕತ್ತಿ ಮಾತನಾಡಿನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಉಪನ್ಯಾಸಕ ಯು.ಎನ್‌.ಮಂಗೊಂಡ ಮಾತನಾಡಿ ವಿದ್ಯಾರ್ಥಿಯು ತನ್ನ ಕುಟುಂಬದ ಕಿರಿಯರಿಗೆ ಮತ್ತು ಹಿರಿಯರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಕಲಿಸುತ್ತಾನೆ.ನಾವು ನಮ್ಮ ಪರಿಸರವನ್ನು ಸುರಕ್ಷಿತವಾಗಿರಿಸುವುದು ಮತ್ತು ಮಾಲಿನ್ಯದಿಂದ ಮುಕ್ತವಾಗಿರುವುದು ಬಹಳ ಮುಖ್ಯ ಇದಕ್ಕಾಗಿ ಯುವ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್‌.ಮುರಾಳ ಸಹ-ಕಾರ್ಯದರ್ಶಿ ವಿ.ವಿ. ಸಂಘ ಅವರು ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತು ಈ ನಿಟ್ಟಿನಲ್ಲಿ ಇಂದಿನ ಯುವಕರು ಪರಿಸರ ಸಂರಕ್ಷಣೆಯಲ್ಲಿ ತನು ಮನದಿಂದ ದುಡಿಯುವುದು ಅಗತ್ಯವಾಗಿದೆ ಎಂದು ಹೇಳಿದರು.ಬೆಳಿಗ್ಗೆ ವಿದ್ಯಾರ್ಥಿಗಳು ಆಶ್ರಯ ಕಾಲೋನಿಯ ಸರಕಾರಿ ಪ್ರಾಥಮಿಕ ಶಾಲೆ, ಉರ್ದು ಮತ್ತು ಕನ್ನಡ ಶಾಲೆಯ ಆವರಣವನ್ನು ಹನುಮಾನ ಮಂದಿರದಲ್ಲಿ ಸ್ವಚ್ಛತೆ ಕಾರ್ಯ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸರ್ವ ಸಿಬ್ಬಂದಿ ವರ್ಗ ಉಪನ್ಯಾಸಕ ವರ್ಗ ಹಾಗೂ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪಾರ್ವತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸುದೀಪ ಸ್ವಾಗತಿಸಿ ಪರಿಚಯಿಸಿದರು. ಸ್ಪೂರ್ತಿ ಸಜ್ಜನ ಹಾಗೂ ಕಲ್ಪನಾ ಕಟ್ಟಿಮನಿ ನಿರೂಪಿಸಿದರು.