ಮಣ್ಣಿನ ಗಣೇಶದ ಮೂಲಕ 120 ಹಳ್ಳಿಗಳಿಗೆ ಪರಿಸರದ ಸಂದೇಶ
Environmental message to 120 villages through clay Ganesha idols
ದೇವರಹಿಪ್ಪರಗಿ 04 : ಭಗವಂತ ಸೃಷ್ಟಿಸಿದ ನಿಸರ್ಗವನ್ನು ಹಾಳು ಮಾಡದೆ, ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಕಾಳಜಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಕರಿಬಂಟನಾಳ ಗುರು ಗಂಗಾಧರೇಶ್ವರ ಹಿರೇಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಯಾಳವಾರ ಗ್ರಾಮದಲ್ಲಿ ಕಲೆ, ಭಕ್ತಿ ಹಾಗೂ ಪರಿಸರ ಸಂರಕ್ಷಣೆಯ ಆಶಯದೊಂದಿಗೆ ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ), ವಿಜಯಪುರ ಹಾಗೂ ಬಸವ ಹಸಿರು ಬಳಗ (ರಿ), ದೇವರಹಿಪ್ಪರಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಎಂಟು ದಿನಗಳ ‘ಅಮೃತ ಹಸ್ತದ ಮಣ್ಣಿನ ಗಣೇಶ’ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜಯಪುರ ಕಲಾ ಮಂದಿರದ ನಿವೃತ್ತ ಪ್ರಾಚಾರ್ಯ ಹಾಗೂ ಖ್ಯಾತ ಕಲಾವಿದ ಪಿ.ಎಸ್. ಕಡೆಮನಿ, ಹಿರಿಯ ಕಲಾವಿದ ಎಸ್.ಟಿ. ಕೆಂಭಾವಿ ಹಾಗೂ ಬಸವ ಹಸಿರು ಬಳಗದ ಗೌರವಾಧ್ಯಕ್ಷ ಎಸ್.ಎಸ್. ಗಡೆದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರದ ಕಾರ್ಯವನ್ನು ಪ್ರಶಂಸಿಸಿದರು. ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಣಕನಾಳ ಮಾತನಾಡಿ, ಜಿಲ್ಲೆಯ ಸುಮಾರು 120 ಗ್ರಾಮಗಳಿಗೆ ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿಗಳು ಹಾಗೂ ತುಳಸಿ ಸಸಿಗಳನ್ನು ವಿತರಿಸಲಾಗುವುದು. ಹಬ್ಬದ ನಂತರ ಮೂರ್ತಿಯನ್ನು ಮನೆಯಲ್ಲಿಯೇ ನೀರಿನಲ್ಲಿ ಕರಗಿಸಿ, ಅದೇ ಮಣ್ಣಿನಲ್ಲಿ ತುಳಸಿ ನೆಡುವ ಮೂಲಕ ಭಕ್ತಿ ಮತ್ತು ಪರಿಸರ ಸಂರಕ್ಷಣೆಯನ್ನು ಒಟ್ಟಿಗೆ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ದೃಶ್ಯಬಿಂದು ಕಲಾ ಪ್ರತಿಷ್ಠಾನದ ಅಧ್ಯಕ್ಷ ಸತೀಶ ಕೇಮಶೆಟ್ಟಿ, ಕಾರ್ಯದರ್ಶಿ ಶಿವನಗೌಡ ಬಿರಾದಾರ ಹಾಗೂ ಪದಾಧಿಕಾರಿಗಳು ಶಿಬಿರದಲ್ಲಿ ತರಬೇತಿ ನೀಡಿದ ಕಲಾವಿದರನ್ನು ಸನ್ಮಾನಿಸಿ ಪ್ರಮಾಣಪತ್ರ ವಿತರಿಸಿದರು. ಶಿಬಿರದಲ್ಲಿ ಮಣ್ಣಿನ ಸಾಂಪ್ರದಾಯಿಕ ಮೂರ್ತಿ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ, ವಿದ್ಯಾರ್ಥಿಗಳು ಹಾಗೂ ಯುವ ಕಲಾವಿದರಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ವಿವಿಧ ಜಿಲ್ಲೆಗಳ ಅನುಭವಿ ಕಲಾವಿದರಾದ ಶ್ಯಾನಪ್ಪ ನಾಯಕ, ಕೆಂಚಪ್ಪ ಬಡಿಗೇರ, ಯೇಸುರಾಜ, ನಾಗಯ್ಯ ವಸ್ತ್ರದ, ಉಮೇಶ ಪೋಳ, ನಾರಾಯಣ ಪಡಿಯಪ್ಪನವರ, ಮೌನೇಶ್ವರ, ವೆಂಕಟೇಶ ಕುಲಕರ್ಣಿ ಹಾಗೂ ಅಶೋಕ ಕುಂಟೋಜಿ ಅವರು ತರಬೇತುದಾರರಾಗಿ ಭಾಗವಹಿಸಿದ್ದರು. ಮಣ್ಣಿನ ಸಿದ್ಧತೆ, ಮೂರ್ತಿಯ ಮೂಲ ರಚನೆ ಸೇರಿದಂತೆ ಗಣೇಶ ಮೂರ್ತಿ ತಯಾರಿಕೆಯ ವಿವಿಧ ಹಂತಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಎಚ್.ಪಿ. ಕರಡಿ ಸ್ವಾಗತಿಸಿದರು. ಶಿಕ್ಷಕ ಬಿ.ವಾಯ್. ಬಂಟನೂರ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 