ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ​‍್ಕ ಕಸ ವಿಲೇವಾರಿ ಮಾಡಿ: ಎಚ್‌ಡಿಎಂಸಿಗೆ ಜಿಲ್ಲಾಧಿಕಾರಿ ಸೂಚನೆ

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ​‍್ಕ ಕಸ ವಿಲೇವಾರಿ ಮಾಡಿ:  ಎಚ್‌ಡಿಎಂಸಿಗೆ  ಜಿಲ್ಲಾಧಿಕಾರಿ ಸೂಚನೆ Ensure proper waste disposal in urban and rural areas: Deputy Commissioner instructs HDMC

ಲೋಕದರ್ಶನ ವರದಿ 

ಧಾರವಾಡ  ಸೆ.25: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ಕಾರ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಡೇಟ್ ಮಾಡಬೇಕು ಹಾಗೂ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಸೂಚಿಸಿದರು. 

ಅವರು ಇಂದು (ಸೆ.25) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಸ್ವಚ್ಚತಾ ಹೀ ಸೇವಾ ಅಭಿಯಾನದ ಸ್ವಚ್ಚತೆಯಲ್ಲಿ ಸಹಭಾಗಿತ್ವ, ಸ್ವಚ್ಚ ಭಾರತ ವಿಕಸಿತ ಭಾರತ ಕುರಿತು ಸಭೆ ಜರುಗಿಸಿ, ಮಾತನಾಡಿದರು. 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೈಗೊಳ್ಳುತ್ತಿರುವ ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ನಗರ ಅಭಿವೃದ್ಧಿ ಯೋಜನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುವ ‘ಸ್ವಚ್ಛತಾ ಸೇವಾ' ಮುಂತಾದ ವಿಶೇಷ ಅಭಿಯಾನಗಳನ್ನು ಅಂತರ್ ಜಾಲದಲ್ಲಿ ಅಪಡೇಟ್ ಮಾಡಬೇಕು,

ರಸ್ತೆಗಳಲ್ಲಿನ ಕಸ ವಿಲೇವಾರಿಯು ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಕಾಣಿಸುವಂತಾಗಬೇಕು. ಆನ್‌ಲೈನ್ ಸುದ್ದಿ ಮತ್ತು ಸ್ಥಳದಲ್ಲಿನ (ಆನ್‌-ಗ್ರೌಂಡ್) ಕೆಲಸಗಳು ಪರಸ್ಪರ ಹೊಂದಾಣಿಕೆಯಾದಾಗ ಮಾತ್ರ ಪಾಲಿಕೆಯ ಕೆಲಸಗಳ ಬಗ್ಗೆ ಜನರಲ್ಲಿ ನಂಬಿಕೆ ಮೂಡುತ್ತದೆ ಎಂದು ಅವರು ಹೇಳಿದರು. 

ಕಸ ಸಂಗ್ರಹಣಾ ವಾಹನಗಳನ್ನು ನಿಗದಿತ ಸಮಯಕ್ಕೆ ಕಳುಹಿಸಬೇಕು ಮತ್ತು ಅಗತ್ಯವಿದ್ದರೆ ಪ್ರತಿ 2 ಗಂಟೆಗೊಮ್ಮೆ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಬೇಕು. ನಿರ್ದಿಷ್ಟ ಸ್ಥಳಗಳಲ್ಲಿ ಸ್ಥಿರ ಕಸದ ಬುಟ್ಟಿಗಳನ್ನು ಇಟ್ಟು, ಜನರು ಅದರಲ್ಲಿ ಕಸ ಹಾಕುವಂತೆ ಪ್ರೇರೇಪಿಸುವ ಯೋಜನೆ ಕೈಗೊಳ್ಳಬೇಕು  ಎಂದು ಸಲಹೆ ನೀಡಿದರು.