ಬಳ್ಳಾರಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು: ಕೋಟ್ಯಂತರ ರೂ. ಮೌಲ್ಯದ ಭೂಮಿ ವಶಕ್ಕೆ

ಬಳ್ಳಾರಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು: ಕೋಟ್ಯಂತರ ರೂ. ಮೌಲ್ಯದ ಭೂಮಿ ವಶಕ್ಕೆ Encroachment of government land cleared in Ballari; land worth crores of rupees recovered

ಲೋಕದರ್ಶನ ವರದಿ   

 ಬಳ್ಳಾರಿ 18:  ನಗರದ ಕೌಲ್ ಬಜಾರ್ ಹಾಗೂ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರಗಳ ಸಹಾಯದಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದರು.  

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರ ನಿರ್ದೇಶನದಂತೆ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್‌. ರುಬೇರ್ ಹಾಗೂ ಸಹಾಯಕ ಆಯುಕ್ತ ರಾಜೇಶ್ ಹೆಚ್‌.ಡಿ. ಅವರ ನೇತೃತ್ವದಲ್ಲಿ ತಹಶೀಲ್ದಾರ್ ಟಿ. ರೇಖಾ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿದರು.  

ಕೌಲ್ ಬಜಾರ್ ವ್ಯಾಪ್ತಿಯ ಸಿಟಿಎಸ್ ವಾರ್ಡ್‌ ಸಂಖ್ಯೆ 20, ಬ್ಲಾಕ್ ಸಂಖ್ಯೆ 13, ಟಿಎಸ್ ಸಂಖ್ಯೆ 1074ರಲ್ಲಿ ಸುಮಾರು 0.93 ಸೆಂಟ್ಸ್‌ ಸರ್ಕಾರಿ ಜಮೀನಿನ ಮೇಲಿನ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಸ್ಥಳದಲ್ಲಿದ್ದ ತಾತ್ಕಾಲಿಕ ಶೆಡ್ಗಳು ಹಾಗೂ ಇತರೆ ನಿರ್ಮಾಣಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.  

ಅದೇ ರೀತಿ, ಬಳ್ಳಾರಿ ಕೋಟೆ ಸಮೀಪದ ಹೊಸಪೇಟೆ ರಸ್ತೆಯ ಕಂಟೋನ್ಮೆಂಟ್ ವ್ಯಾಪ್ತಿಯ ಸಿಟಿಎಸ್ ವಾರ್ಡ್‌ ಸಂಖ್ಯೆ 21, ಬ್ಲಾಕ್ ಸಂಖ್ಯೆ 03, ಟಿಎಸ್ ಸಂಖ್ಯೆ 59(ಪಿ)ಯಲ್ಲಿನ ಸುಮಾರು 0.10.50 ಸೆಂಟ್ಸ್‌ ಸರ್ಕಾರಿ ಜಮೀನಿನ ಮೇಲಿನ ಅತಿಕ್ರಮಣವನ್ನೂ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.  

ಎಚ್ಚರಿಕೆ ಫಲಕ ಅಳವಡಿಕೆ  

ತೆರವುಗೊಳಿಸಲಾದ ಜಾಗಗಳಲ್ಲಿ ಸರ್ಕಾರಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಈ ಜಮೀನುಗಳು ಸರ್ಕಾರದ ಸ್ವತ್ತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಅಕ್ರಮ ಒತ್ತುವರಿ ನಡೆಸಲು ಯತ್ನಿಸಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.  

ಕಾರ್ಯಾಚರಣೆಯಲ್ಲಿ ಸ್ಥಳೀಯ ಕಂದಾಯ ನೀರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು. ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.