ಪುಲ್ವಾಮದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಸಾವು, ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತ

ಶ್ರೀನಗರ, ಜೂ.26  ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ಸಂಜೆ ಆರಂಭಿಸಿದ ಶೋಧ ಕಾರ್ಯಾಚರಣೆಯ ವೇಳೆ ಉಂಟಾದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.ಅಲ್ಲಿಂದ ಕೊನೆಯ ಬಾರಿಗೆ ವರದಿ ಬಂದಾಗಲೂ ಕಾರ್ಯಾಚರಣೆ ನಡೆಯುತ್ತಿತ್ತು. ಕಳೆದ ರಾತ್ರಿಯಿಂದ ಆ ಪ್ರದೇಶದಲ್ಲಿ ಮೊಬೈಲ್ ಇಂಟರ್‌ ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಮ್ಮು ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣಾ ಪಡೆ, ಸಿಆರ್‌ಪಿಎಫ್ ಮತ್ತು ರಾಷ್ಟ್ರೀಯ ರೈಫಲ್ಸ್‌ ಜಂಟಿಯಾಗಿ ಕಳೆದ ಸಂಜೆ 6 ಗಂಟೆ ಸುಮಾರಿಗೆ ಪುಲ್ವಾಮ ಜಿಲ್ಲೆಯ ಅವಾಂತಿಪೊರದ ಟ್ರಾಲ್‌ ಟೌನ್‌ನಿಂದ 7 ಕಿ.ಮೀ.ದೂರದ ಚ್ವೆವ್ಸ್ ಉಲಾರ್ ಎಂಬಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಪಡೆಯು ಗ್ರಾಮದ ಒಂದು ನಿರ್ದಿಷ್ಟ ಪ್ರದೇಶಕ್ಕೆ ತೆರಳುತ್ತಿದ್ದಾಗ ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆದಿದೆ. ಹತ್ತು ನಿಮಿಷಗಳ ಕಾಲ ನಡೆದ ಎನ್‌ ಕೌಂಟರ್‌ ನ ಬಳಿಕ ಪ್ರದೇಶ ನಿಶ್ಯಬ್ಧವಾಗಿದೆ. ಸಮೀಪದ ಎಲ್ಲಾ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ ಎಂದು ಅವು ತಿಳಿಸಿವೆ.ಉಗ್ರರು ಕತ್ತಲಲ್ಲಿ ತಪ್ಪಿಸಿಕೊಳ್ಳದಂತೆ ತಡೆಯಲು ಗ್ರಾಮದ ಎಲ್ಲಾ ಹೊರಹೋಗುವ ಮಾರ್ಗಗಳನ್ನು ಬಂದ್ ಮಾಡಿ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ಕರೆಸಲಾಗಿದೆ ಎಂದು ಅವು ತಿಳಿಸಿವೆ.ರಾತ್ರಿಯ ವೇಳೆ ಕೂಡ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.  ಬೆಳಗ್ಗಿನ ಜಾವ ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೋರ್ವ ಉಗ್ರ ಸಾವನ್ನಪ್ಪಿದ್ದಾನೆ. ಮನೆಯೊಂದರಲ್ಲಿ ಮತ್ತೋರ್ವ ಉಗ್ರ ಅಡಗಿದ್ದು, ಆ ಮನೆಯನ್ನು ಭದ್ರತಾ ಸಿಬ್ಬಂದಿ ಸ್ಫೋಟಿಸಿದ್ದಾರೆ. ಪ್ರದೇಶದಲ್ಲಿ ಈಗಲೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.ಪ್ರದೇಶದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಹೆಚ್ಚುವರಿ ಭದ್ರತಾ ಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.ವದಂತಿಗಳನ್ನು ಹರಡದಂತೆ ತಡೆಯಲು ಟ್ರಾಲ್‌ ಪ್ರದೇಶದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌-ಬಿಎಸ್‌ಎನ್‌ಎಲ್‌ ಸಹಿತ ಎಲ್ಲಾ ಸೆಲ್ಯುಲರ್ ಕಂಪನಿಗಳ ಮೊಬೈಲ್ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.