ಮಹಿಳೆಯರ ಸುರಕ್ಷತೆ, ದೂರುಗಳ ತ್ವರಿತ ವಿಲೇವಾರಿಗೆ ಒತ್ತು

ಮಹಿಳೆಯರ ಸುರಕ್ಷತೆ, ದೂರುಗಳ ತ್ವರಿತ ವಿಲೇವಾರಿಗೆ ಒತ್ತು  Emphasis on women's safety and speedy disposal of complaints

ಲೋಕದರ್ಶನ ವರದಿ  

ಬೆಳಗಾವಿ, ಸೆ. 08: ಹತ್ತು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳು, ಕಚೇರಿಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ (ಐಸಿಸಿ)ಯನ್ನು ಕಡ್ಡಾಯವಾಗಿ ರಚಿಸಿ, ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೂಚಿಸಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್ನಲ್ಲಿ ಮಂಗಳವಾರ ನಡೆದ ಮಹಿಳಾ ಸ್ಪಂದನ ಹಾಗೂ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   

ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪೊಲೀಸ್ ಠಾಣೆಗೆ ಬಂದಾಗ ಸಿಬ್ಬಂದಿ ಸೌಜನ್ಯದಿಂದ ಹಾಗೂ ಸೂಕ್ಷ್ಮತೆಯಿಂದ ವರ್ತಿಸಬೇಕು. ದೂರು ನೀಡಲು ಬಂದ ಮಹಿಳೆಯರೊಂದಿಗೆ ಯಾವುದೇ ರೀತಿಯ ದುರ್ವರ್ತನೆ ತೋರದೆ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ದೂರುಗಳಲ್ಲಿ ಸತ್ಯಾಂಶವಿದ್ದರೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  

ದೂರು ದಾಖಲಿಸದೆ ಅನಗತ್ಯ ನೆಪಗಳನ್ನು ಹೇಳುವುದು ಅಥವಾ ಪ್ರಕರಣ ದಾಖಲಿಸಲು ವಿಳಂಬ ಮಾಡುವುದು ಸಹಿಸಲಾಗದು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರಾಕರಿಸಿದಲ್ಲಿ ಅಥವಾ ಅನಗತ್ಯ ವಿಳಂಬ ಮಾಡಿದರೆ, ಸಂಬಂಧಪಟ್ಟ ಮಹಿಳೆಯರು ನೇರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಬಹುದು. ಇಂತಹ ದೂರುಗಳನ್ನು ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.