ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಅಗತ್ಯ: ಅಶೋಕ ಬಿರಾದಾರ

ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಅಗತ್ಯ: ಅಶೋಕ ಬಿರಾದಾರ Emphasis on quality pre-primary education is essential: Ashok Biradar

  ಸಿಂದಗಿ 18: ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಅತ್ಯಂತ ಮಹತ್ವದ್ದಾಗಿದ್ದು, ಉತ್ತಮ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿಂದಗಿ ನಗರದಲ್ಲಿ ಯುರೋ ಕಿಡ್ಸ್‌ ಶಾಲೆ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಸಿಂದಗಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ ಬಿರಾದಾರ ಹೇಳಿದರು.  

ಅವರು ಜುಲೈ 1ರಂದು ಯುರೋ ಕಿಡ್ಸ್‌ ಇಂಟರ್ನ್ಯಾಷನಲ್ ಪ್ರೀ ಸ್ಕೂಲ್ನಲ್ಲಿ ನಡೆದ ಪಾಲಕರ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆ ಮತ್ತು ಪಾಲಕರ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು.  

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಸೆಂಟರ್ ಹೆಡ್ ಕವಿತಾ ಹಿರೇಮಠ, ತಮ್ಮ ಶಾಲೆಯ ವಿಶೇಷ ಪಠ್ಯಕ್ರಮ, ಇತರ ಶಾಲೆಗಳಿಗಿಂತ ಭಿನ್ನವಾದ ಬೋಧನಾ ವಿಧಾನಗಳು ಹಾಗೂ ಮಕ್ಕಳಿಗಾಗಿ ಅನುಸರಿಸುತ್ತಿರುವ ಕಾಳಜಿ ಕ್ರಮಗಳ ಕುರಿತು ಪಾಲಕರಿಗೆ ಮಾಹಿತಿ ನೀಡಿದರು.  

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಜ್ಞಾನ ಪ್ರಗತಿ ಪರಿಷತ್ನ ಹಿರಿಯ ಪಿರಮಿಡ್ ಶಿಕ್ಷಕಿ ಧನಮ್ಮ ಬಿರಾದಾರ ಮಾತನಾಡಿ, ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ಪಾಲಕರ ಸಹನೆ, ನೆಮ್ಮದಿಯ ವಾತಾವರಣ ಹಾಗೂ ಸೂಕ್ತ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಲು ಪ್ರತಿದಿನ ಧ್ಯಾನ, ಯೋಗಾಸನ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ವಿಶ್ವ ವೈದ್ಯರ ದಿನದ ಅಂಗವಾಗಿ ಸಂಸ್ಥೆಯ ನಿರ್ದೇಶಕ ನವೀನಕುಮಾರ ರೂಗಿ ಅವರು ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು.  ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಸಾಕ್ಷಿ ಎಸ್‌. ಪಾಟೀಲ, ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಎಸ್‌. ರೂಗಿ, ವಿದ್ಯಾರ್ಥಿಗಳ ಪಾಲಕರು, ಶಿಕ್ಷಕಿಯರಾದ ಸವಿತಾ ತಳಕೇರಿ ಹಾಗೂ ರಂಜಿತಾ ಗುಡ್ಡಿ ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.