ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಮೈಸೂರು ಜಿಲ್ಲೆಯನ್ನು ಕೊರೋನಾ ಮುಕ್ತವನ್ನಾಗಿ ಮಾಡಲು ಪ್ರಯತ್ನ: ಸಚಿವ ಎಸ್.ಟಿ.ಸೋಮಶೇಖರ್

ಬೆಂಗಳೂರು, ಏ.10, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ನನ್ನು ಮೈಸೂರು ಜಿಲ್ಲಾ ಉಸ್ತುವಾರಿ  ಸಚಿವರನ್ನಾಗಿ ನೇಮಿಸಿದ್ದಕ್ಕೆ ಅವರಿಗೆ  ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ತಮ್ಮ ಜವಾಬ್ದಾರಿ ಹೆಚ್ಚಾಗಿದೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ  ನಿರ್ವಹಿಸುತ್ತೇನೆಂಬ ವಿಶ್ವಾಸ ತಮಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೈಸೂರು ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು  ಕೊರೊನಾ ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿದೆ. ಹೀಗಾಗಿ ಈ ಜಿಲ್ಲೆಯಲ್ಲಿ  ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಕೊರೋನಾ ಮುಕ್ತವನ್ನಾಗಿ ಮಾಡಬೇಕಾಗಿದೆ. ಇದಕ್ಕೆ  ಜಿಲ್ಲಾಡಳಿತದಲ್ಲಿರುವ ಯುವ ಹಾಗೂ ದಕ್ಷ ಅಧಿಕಾರಿಗಳ ಸಹಕಾರದಿಂದ ಇನ್ನಷ್ಟು  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ.  ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಜಿಲ್ಲೆ  ಶೀಘ್ರ ಕೊರೊನಾ ಮುಕ್ತವಾಗಲಿ ಎಂದು ಇದೇ ವೇಳೆ ಆಶೀಸುತ್ತೇನೆ ಎಂದು ತಿಳಿಸಿದ್ದಾರೆ.
ಜೊತೆಗೆ ಆ ಭಾಗದ ಹಾಲಿ  ಮತ್ತು ಮಾಜಿ ಸಂಸತ್ ಸದಸ್ಯರು, ಶಾಸಕರ ಸಹಕಾರ, ಸುತ್ತೂರು ಶ್ರೀಗಳ ಮಾರ್ಗದರ್ಶನ,  ಯದುವಂಶದ ಪ್ರಮೋದಾದೇವಿ ಒಡೆಯರ್ ಹಾಗೂ ಯುದುವೀರ ಒಡೆಯರ್ ಹಿಂದಿನ ಉಸ್ತುವಾರಿ ಸಚಿವರಾದ  ಸೋಮಣ್ಣ ಅವರು ಮಾಧ್ಯಮ ಮಿತ್ರರು ಸೇರಿದಂತೆ ಮೈಸೂರಿನ ಪ್ರಜ್ಞಾವಂತ ನಾಗರೀಕರು, ಸಂಘ  ಸಂಸ್ಥೆಗಳು ಹಾಗೂ ಹಲವು ಪ್ರಮುಖರ ಸಲಹೆ ಸಹಕಾರಗಳ ಮೇರೆಗೆ ಜಿಲ್ಲೆಯ ಸರ್ವತೋಮುಖ  ಅಭಿವೃದ್ಧಿಗೆ ಶ್ರಮಿಸಲು ಬದ್ಧನಿದ್ದೇನೆ. ಈಗಾಗಲೇ ಸಾಕಷ್ಟು ಹಿರಿಮೆ ಗರಿಮೆಗಳನ್ನು  ಹೊಂದಿರುವ ಮೈಸೂರು ಜಿಲ್ಲೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸರಕಾರದ ಕನಸಿಗೆ  ಎಲ್ಲರ ಸಹಕಾರದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.ಇಂದು ಸಂಜೆ 6ಗಂಟೆಗೆ ನಾನು ಮೈಸೂರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ  ಮಾಹಿತಿ ಪಡೆದು ನಂತರ ವಾಸ್ತವ್ಯ ಹೂಡಿ , ನಾಳೆ ಬೆಳಿಗ್ಗೆ  ಜನಪ್ರತಿನಿಧಿಗಳ ಸಭೆ ನಡೆಸುತ್ತೇನೆ. ತಮ್ಮನ್ನು  ಸ್ವಾಗತಿಸಲು ಯಾರೂ ಬರುವುದು ಬೇಡ. ಈ ಸಂದರ್ಭದಲ್ಲಿ ನಾನು  ಯಾವುದೇ ಪುಷ್ಪಗುಚ್ಛಗಳನ್ನು ಸ್ವೀಕಾರ ಮಾಡುವುದಿಲ್ಲ. ಸಂಬಂಧಪಟ್ಟ  ಅಧಿಕಾರಿಗಳು ಮಾತ್ರ  ಇರಬೇಕು. ಎಲ್ಲರೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.