ಆರೋಗ್ಯವಂತ ಸಿಬ್ಬಂದಿಯಿಂದ ದಕ್ಷ ಆಡಳಿತ ಸೇವೆ ಸಾಧ್ಯ: ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ

ಆರೋಗ್ಯವಂತ ಸಿಬ್ಬಂದಿಯಿಂದ ದಕ್ಷ ಆಡಳಿತ ಸೇವೆ ಸಾಧ್ಯ: ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ  Efficient administrative service is possible with healthy staff: Deputy Commissioner Kavita S Mannik

ವಿಜಯನಗರ (ಹೊಸಪೇಟೆ) 20 : ಸಾರ್ವಜನಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಸಾರ್ವಜನಿಕರಿಗೆ ದಕ್ಷತೆಯಿಂದ ಸೇವೆ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಹಾಗೂ ರೋಟರಿ ಕ್ಲಬ್ ಆಫ್ ಹಂಪಿ ಪರ್ಲ್ಸ ಹೊಸಪೇಟೆ ಇವರ ಸಹಯೋಗದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ’ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಬೆಳಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕರ ಅಹವಾಲು ಆಲಿಸುವುದು, ಕಡತಗಳ ವಿಲೇವಾರಿ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಂತಹ ದೈನಂದಿನ ಒತ್ತಡದ ಕೆಲಸದ ನಡುವೆ ನೌಕರರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದನ್ನೇ ಮರೆತುಬಿಡುತ್ತಾರೆ. ಆದ್ದರಿಂದ ಆರೋಗ್ಯ ಕೈಕೊಟ್ಟಾಗ ಆಸ್ಪತ್ರೆಗೆ ಓಡುವುದಕ್ಕಿಂತ, ಮುಂಜಾಗ್ರತೆಯಾಗಿ ವರ್ಷಕ್ಕೊಮ್ಮೆಯಾದರೂ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇಂತಹ ಉಚಿತ ಶಿಬಿರಗಳನ್ನು ಕೇವಲ ಓಪಚಾರಿಕ ಎನ್ನದೆ, ಪ್ರತಿಯೊಬ್ಬ ಮುಂಚೂಣಿ ಸಿಬ್ಬಂದಿಯೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು

, ಜಿಲ್ಲಾಡಳಿತದ ಯಶಸ್ಸು ಸಿಬ್ಬಂದಿ ವರ್ಗದ ಕಾರ್ಯದಕ್ಷತೆಯ ಮೇಲೆ ನಿಂತಿರುತ್ತದೆ. ಸಿಬ್ಬಂದಿಗಳು ಆರೋಗ್ಯವಾಗಿದ್ದರೆ ಮಾತ್ರ ಜಿಲ್ಲೆಯ ಪ್ರಗತಿ ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದರು.  ರೋಟರಿ ಕಣ್ಣಿನ ಆಸ್ಪತ್ರೆಯ ನುರಿತ ತಜ್ಞ ವೈದ್ಯರ ತಂಡವು ಅತ್ಯಾಧುನಿಕ ಡಿಜಿಟಲ್ ಉಪಕರಣಗಳ ಮೂಲಕ ಸಿಬ್ಬಂದಿಗಳ ಉಚಿತ ಕಣ್ಣಿನ ತಪಾಸಣೆ ಜೊತೆಗೆ ರಕ್ತದೊತ್ತಡ, ಮಧುಮೇಹ ಹಾಗೂ ಸಾಮಾನ್ಯ ದೈಹಿಕ ತಪಾಸಣೆ ನಡೆಸಲಾಯಿತು. ತಪಾಸಣೆಯ ನಂತರ ಅಗತ್ಯವಿದ್ದ ಸಿಬ್ಬಂದಿಗಳಿಗೆ ಸ್ಥಳದಲ್ಲೇ ಉಚಿತವಾಗಿ ಅಗತ್ಯ ಓಷಧಿ ಮತ್ತು ಮಾತ್ರೆಗಳನ್ನು ವಿತರಿಸಲಾಯಿತು.