ಭರವಸೆ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ಭರವಸೆ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು  Educational assistance for students from the Bharavase organization


ಹಾವೇರಿ, ಸೆ.15: ಪ್ರತಿಯೊಬ್ಬ ಮಗುವಿನ ಕೈಯಲ್ಲಿ ಪುಸ್ತಕವಿರಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಿಗೆ ಅವಕಾಶ ದೊರೆಯಬೇಕು ಹಾಗೂ ಸಂಪನ್ಮೂಲಗಳ ಕೊರತೆಯಿಂದ ಯಾವುದೇ ವಿದ್ಯಾರ್ಥಿಯ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ ‘ಭರವಸೆ’ ಸಂಸ್ಥೆ ಹಾವೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಿಕ್ಷಣಕೇಂದ್ರಿತ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ.  

ಸಮಾಜಮುಖಿ ಕಾರ್ಯಗಳ ಭಾಗವಾಗಿ ಹಾವೇರಿಯ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ ಸಂಸ್ಥೆಯ ತಂಡ, ವಿದ್ಯಾರ್ಥಿಗಳು ಮನವಿ ಮಾಡಿದ್ದ ನೋಟ್ಬುಕ್ಗಳನ್ನು ವಿತರಿಸಿತು. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುವುದು ಇದರ ಉದ್ದೇಶವಾಗಿದೆ.  

ನಂತರ ಹಾವೇರಿ ತಾಲೂಕಿನ ಶಿಗೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ತಂಡ, ಅಲ್ಲಿನ ವಿದ್ಯಾರ್ಥಿಗಳಿಗೆ ರೈನ್ಕೋಟ್ಗಳು ಹಾಗೂ ಶಾಲಾ ಪುಸ್ತಕಗಳನ್ನು ವಿತರಿಸಿತು. ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯೊಬ್ಬರಿಗೆ ವಿದ್ಯಾಭ್ಯಾಸಕ್ಕೆ ಲ್ಯಾಪ್ಟಾಪ್ ಅಗತ್ಯವಿರುವುದು ಸಂಸ್ಥೆಯ ಗಮನಕ್ಕೆ ಬಂದಿದ್ದು, ಆಕೆಯ ಶಿಕ್ಷಣಕ್ಕೆ ತಂತ್ರಜ್ಞಾನ ಮತ್ತಷ್ಟು ಬಲ ನೀಡಲಿ ಎಂಬ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಲ್ಯಾಪ್ಟಾಪ್ನ್ನು ಉಡುಗೊರೆಯಾಗಿ ನೀಡಲಾಯಿತು.  

ಮುಂದುವರಿದು, ಹಾವೇರಿಯ ಐಟಿಐ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣಕ್ಕೆ ಪೂರಕವಾಗುವಂತೆ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲಾಯಿತು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಡಿಜಿಟಲ್ ಜ್ಞಾನ ಹಾಗೂ ತಾಂತ್ರಿಕ ಕೌಶಲಗಳು ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಪ್ರಾಯೋಗಿಕ ಜ್ಞಾನ ಪಡೆಯಲು ಈ ಲ್ಯಾಬ್ ಸಹಕಾರಿಯಾಗಲಿದೆ.  

ಶಾಲಾ ಮಕ್ಕಳಿಗೆ ನೋಟ್ಬುಕ್ಗಳು ಮತ್ತು ಪುಸ್ತಕಗಳು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ಯುವಕರಿಗೆ ಕಂಪ್ಯೂಟರ್ ಲ್ಯಾಬ್ ಮೂಲಕ ಶಿಕ್ಷಣದ ವಿವಿಧ ಹಂತಗಳಲ್ಲಿ ಅಗತ್ಯ ನೆರವು ಒದಗಿಸುವ ಮೂಲಕ ‘ಭರವಸೆ’ ಸಂಸ್ಥೆ ತನ್ನ ಸಮಾಜಮುಖಿ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದೆ.  

ಈ ಕಾರ್ಯಕ್ರಮಗಳಲ್ಲಿ ‘ಭರವಸೆ’ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುನಿಲ್ ಗೌಡ ಹಾಗೂ ಕಾರ್ಯದರ್ಶಿ ಮಂಜೇಶ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಶಿಕ್ಷಣ ಮತ್ತು ಭವಿಷ್ಯದ ಕುರಿತು ಪ್ರೋತ್ಸಾಹಿಸಿದರು.  

“ನೆರವು ಎಂದರೆ ಕೇವಲ ಒಂದು ವಸ್ತುವನ್ನು ನೀಡುವುದಲ್ಲ; ಒಬ್ಬರ ಕನಸಿಗೆ ರೆಕ್ಕೆ ನೀಡುವುದು” ಎಂಬ ಆಶಯದೊಂದಿಗೆ ‘ಭರವಸೆ’ ಸಂಸ್ಥೆ ತನ್ನ ಸೇವಾ ಕಾರ್ಯಗಳನ್ನು ಮುಂದುವರಿಸುತ್ತಿದೆ. ಸಣ್ಣ-ಸಣ್ಣ ನೆರವುಗಳು ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂಬ ನಂಬಿಕೆಯೊಂದಿಗೆ, ಅವಕಾಶದ ಕೊರತೆಯಿಂದ ಯಾವುದೇ ವಿದ್ಯಾರ್ಥಿಯ ಕನಸು ನಿಲ್ಲದಂತೆ ಮಾಡಲು ಸಂಸ್ಥೆ ಸಂಕಲ್ಪಬದ್ಧವಾಗಿದೆ.