ಶಿಕ್ಷಣವೇ ಮಹಿಳೆಯರ ಶಕ್ತಿ, ಯಶಸ್ವಿ ಬದುಕಿಗೆ ಶಿಕ್ಷಣವೇ ಮಾರ್ಗದರ್ಶಿ: ಡಾ.ನಾಗಲಕ್ಷ್ಮೀ ಚೌಧರಿ

ಶಿಕ್ಷಣವೇ ಮಹಿಳೆಯರ ಶಕ್ತಿ, ಯಶಸ್ವಿ ಬದುಕಿಗೆ ಶಿಕ್ಷಣವೇ ಮಾರ್ಗದರ್ಶಿ: ಡಾ.ನಾಗಲಕ್ಷ್ಮೀ ಚೌಧರಿ Education is the power of women, education is the guide to a successful life: Dr. Nagalakshmi Chaudh

ಲೋಕದರ್ಶನ ವರದಿ  


ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಂದ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ 

ಶಿಕ್ಷಣವೇ ಮಹಿಳೆಯರ ಶಕ್ತಿ, ಯಶಸ್ವಿ ಬದುಕಿಗೆ ಶಿಕ್ಷಣವೇ ಮಾರ್ಗದರ್ಶಿ: ಡಾ.ನಾಗಲಕ್ಷ್ಮೀ ಚೌಧರಿ 

ಕೊಪ್ಪಳ   05:  ಅರಿವೇ ಬದುಕು, ಅಜ್ಞಾನವೇ ಸಾವು ಎಂಬ ಮಾತಿನಂತೆ ಶಿಕ್ಷಣದಿಂದ ಮಾತ್ರ ನಮಗೆ ಪ್ರಪಂಚ ಜ್ಞಾನ ಬೆಳೆಯಲು ಸಾಧ್ಯ. ಶಿಕ್ಷಣವನ್ನು ಶಕ್ತಿಯಾಗಿಸಿಕೊಂಡು ಪರಿಶ್ರಮದಿಂದ ಯಶಸ್ವಿಯಾಗಬಹುದು. ಮಹಿಳೆಯರು ಸುಶಿಕ್ಷಿತರಾಗಲೇಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ವಿದ್ಯಾರ್ಥಿನಿಯರಿಗೆ ತಿಳಿಸಿದರು. 

ಗುರುವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಆಯೋಗದ ಅಧ್ಯಕ್ಷರು ಹಾಗೂ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಶಿಕ್ಷಣ ನಮಗೆ ಜ್ಞಾನವನ್ನು ನೀಡುತ್ತದೆ. ಪ್ರಪಂಚದ ಆಗುಹೋಗುಗಳನ್ನು ಪರಿಚಯಿಸುತ್ತದೆ. ನಮ್ಮ ಹಕ್ಕುಗಳು, ಕರ್ತವ್ಯ, ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ. ಭವಿಷ್ಯಕ್ಕೆ ಮಾರ್ಗದರ್ಶಿಯಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರೂ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಲೇಬೇಕು. ಶಿಕ್ಷಣವನ್ನು ಶಕ್ತಿಯಾಗಿ ಬಳಸಿಕೊಳ್ಳಬೇಕು. ಓದುವ ವಯಸ್ಸಿನಲ್ಲಿ ಅನಗತ್ಯ ಆಕರ್ಷಣೆ, ಆಮೀಷಕ್ಕೆ ಒಳಗಾಗದೇ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡಿ, ಪರಿಶ್ರಮದಿಂದ ಬದುಕಲ್ಲಿ ಯಶಸ್ವಿಯಾಗಬೇಕು. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಮ್ಮ ಶ್ರಮ ಮತ್ತು ಶ್ರದ್ಧೆಯೇ ಯಶಸ್ಸಿನ ಮೂಲಮಂತ್ರ ಎಂದು ಅವರು ವಿದ್ಯಾರ್ಥಿನಿಯರಿಗೆ ತಿಳಿಸಿದರು. 

ಪ್ರಸ್ತುತ ದಿನಗಳಲ್ಲಿ ಚಿಕ್ಕಮಕ್ಕಳಿಂದ ವೃದ್ಧರವರೆಗೂ ಅತ್ಯಂತ ಆಕರ್ಷಿತ ಮಾಧ್ಯಮವೆಂದರೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸಪ್ ನಂತಹ ಸಾಮಾಜಿಕ ಮಾಧ್ಯಮಗಳು ಹಾಗೂ ರೀಲ್ಸ್‌ಗಳು. ಮಹಿಳೆಯರು ಭಾವನಾತ್ಮಕ ಜೀವಿಗಳಾದ್ದರಿಂದ ವಂಚಕರು ಇಂತಹ ಸಾಮಾಜಿಕ ಮಾಧ್ಯಮಗಳನ್ನು ದಾಳವಾಗಿಸಿಕೊಂಡು ಅಮಾಯಕ ಹುಡುಗಿಯರನ್ನು, ಮಹಿಳೆಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು, ನಂಬಿಸಿ, ಮೋಸ ಮಾಡುತ್ತಾರೆ. ಕೆಲ ಸಂದರ್ಭಗಳಲ್ಲಿ ಬ್ಲಾಕ್‌ಮೇಲ್ ಮಾಡಿ, ಹುಡುಗಿಯರನ್ನು ತಮ್ಮ ಇಷ್ಟದಂತೆ ಬಳಸಿಕೊಳ್ಳುತ್ತಾರೆ. ಇದರಿಂದ ಮೋಸ ಹೋದ ಹುಡುಗಿಯರು, ಮಹಿಳೆಯರು ಬೇಸತ್ತು ಜೀವವನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು. ಅಪರಿಚಿತ ವ್ಯಕ್ತಿಯಿಂದ ಬರುವ ಸ್ನೇಹದ ಪ್ರಸ್ತಾಪಗಳನ್ನು ಒಪ್ಪಿಕೊಳ್ಳಬಾರದು, ಅಪರಿಚಿತರೊಂದಿಗೆ ಅನಗತ್ಯ ಸಂಪರ್ಕ ಬೆಳೆಸಬಾರದು. ಇಂದಿನ ಇಂಟರ್‌ನೆಟ್, ಸಾಮಾಜಿಕ ಮಾಧ್ಯಮಗಳ ಶಕ್ತಿಯನ್ನು ನಿಮ್ಮ ಶಿಕ್ಷಣಕ್ಕೆ, ಭವಿಷ್ಯಕ್ಕೆ ಪೂರಕವಾಗುವಂತೆ ಸಕಾರಾತ್ಮಕವಾಗಿ ಬಳಸಿಕೊಳ್ಳಿ. ಒಂದು ವೇಳೆ ಸೈಬರ್ ವಂಚನೆಗೆ ಒಳಗಾದಲ್ಲಿ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಸಂಪರ್ಕಿಸಿ, ದೂರು ದಾಖಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಮಕ್ಕಳ ಸಹಾಯವಾಣಿ 1098 ಗೆ ಅಥವಾ ಪೊಲೀಸ್ ಇಲಾಖೆ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. 

ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ಆದರೆ ಅವುಗಳನ್ನು ಬಳಸಿಕೊಳ್ಳುವ ಜ್ಞಾನ ನಮಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ಅರಿತುಕೊಳ್ಳಬೇಕು. ಅಗತ್ಯ ಮೂಲಸೌಕರ್ಯಗಳನ್ನು ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆದ್ದರಿಂದ ನಿಮ್ಮ ಹಕ್ಕುಗಳಿಗಾಗಿ ಹೋರಾಡಿ. ಅನ್ಯಾಯವಾದಾಗ ಪ್ರತಿಭಟಿಸುವ ದೈರ್ಯ ಬೆಳೆಸಿಕೊಳ್ಳಿ. ಸರ್ಕಾರದಿಂದ ನೂರಾರು ಯೋಜನೆಗಳು ಜಾರಿಯಾಗಿದ್ದು, ಅವುಗಳನ್ನು ತಿಳಿದುಕೊಂಡು ನಿಮಗೆ ಅಗತ್ಯವಿರುವ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆದುಕೊಳ್ಳಿ. ಯಾವುದೇ ಸರ್ಕಾರಿ ಯೋಜನೆ ಯಶಸ್ವಿಯಾಗಬೇಕಾದರೆ ಅದನ್ನು ಬಳಸಿಕೊಳ್ಳುವ ಫಲಾನುಭವಿಗಳ ಜವಾಬ್ದಾರಿಯೂ ಮುಖ್ಯವಾಗುತ್ತದೆ. ಆದ್ದರಿಂದ ಯೋಜನೆಗಳ ಸಮರ​‍್ಕ ಬಳಕೆ ಮಾಡಿಕೊಳ್ಳಿ. ನಮ್ಮ ಊರು, ನಮ್ಮ ಜಿಲ್ಲೆ, ನಮ್ಮ ರಾಜ್ಯ, ನಮ್ಮ ದೇಶದ ಬಗ್ಗೆ ಕನಿಷ್ಠ ಜ್ಞಾನವಾದರೂ ನಮಗಿರಬೇಕು. ಸರ್ಕಾರಿ ವ್ಯವಸ್ಥೆಯ ಕಾರ್ಯನಿರ್ವಣೆಯ ಪರಿಚಯವಿರಬೇಕು. ಆಗ ಮಾತ್ರ ಸರ್ಕಾರದ ಯೋಜನೆಯ ಸಮರ​‍್ಕ ಲಾಭ ನಮಗೆ ದೊರೆಯುತ್ತದೆ ಎಂದು ಸರ್ಕಾರಿ ಯೋಜನೆಗಳನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. 

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಅಧ್ಯಕ್ಷರೊಂದಿಗೆ ಸಂವಾದ ನಡೆಸುತ್ತಾ ತಮ್ಮ ಊರು, ಕಾಲೇಜಿನಲ್ಲಿರುವ ಮೂಲಭೂತ ಸೌಕರ್ಯದ ಕೊರತೆಗಳ ಬಗ್ಗೆ ದೂರುಗಳನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್‌.ಅರಸಿದ್ದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವೈ.ಶೆಟ್ಟೆಪ್ಪನವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.