ಶಿಕ್ಷಣ, ಪೌಷ್ಟಿಕ ಆಹಾರ, ಉತ್ತಮ ಆರೋಗ್ಯ, ಹೆಣ್ಣಿನ ಸಶಕ್ತೀಕರಣಕ್ಕೆ ಅವಶ್ಯ: ಪಂಕಜ ಕೊಣ್ಣರು

ಶಿಕ್ಷಣ, ಪೌಷ್ಟಿಕ ಆಹಾರ, ಉತ್ತಮ ಆರೋಗ್ಯ, ಹೆಣ್ಣಿನ ಸಶಕ್ತೀಕರಣಕ್ಕೆ ಅವಶ್ಯ: ಪಂಕಜ ಕೊಣ್ಣರು Education, nutritious food, good health, essential for women's empowerment: Pankaja Konnaru

 

ವಿಜಯಪುರ 03: ಹೆಣ್ಣು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕಾದರೆ ಶಿಕ್ಷಣ ಅತ್ಯವಶ್ಯಕವಾಗಿದ್ದು, ಪೋಷಕರು ಇದಕ್ಕೆ ಪ್ರೋತ್ಸಾಹಿಸಬೇಕು ಎಂದು ಸಿಂದಗಿಯ ಗೌರವಾನ್ವಿತ ಸಿವ್ಹಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಪಂಕಜ ಕೊಣ್ಣರು ತಿಳಿಸಿದ್ದಾರೆ.  

ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ, ಮೇರಾ ಯುವ ಭಾರತ (ಮೈ ಭಾರತ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ವಿಜಯಪುರ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ, ತಾಲೂಕು ಪಂಚಾಯತ, ಸಿಂದಗಿ ಇವರ ಸಂಯುಕ್ತಾಶ್ರಯದಲ್ಲಿ ಸಿಂದಗಿಯ ಹೆಜ್ ಜಿ ಕಲಾ, ವಾಣಿಜ್ಯ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ, ಪೋಷಣ ಮಾಸಾಚರಣೆ, ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ, ತಂಬಾಕು ಮುಕ್ತ ಯುವ ಅಭಿಯಾನ, ವಿಕಸಿತ ಭಾರತ-2047 ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಣ್ಣು ಸಮಾಜದ ಕಣ್ಣು, ಸೂಕ್ತ ಸ್ಥಾನಮಾನ ಗೌರವ ದೊರಕಿಸಿಕೊಡುವ ವಾತಾವರಣ ನಿರ್ಮಾಣದ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.  ಶಾಲೆಗಳಲ್ಲಿ ಹೆಣ್ಣು ಮಕ್ಕಳ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಬೇಕು, ಆಗ ಮಾತ್ರ ಮುಕ್ತ ವಾತಾವರಣದಲ್ಲಿ ಹೆಣ್ಣು ಮಕ್ಕಳು ಕಲಿಯಲು ಸಾಧ್ಯ ಎಂದು ಅವರು ತಿಳಿಸಿದರು.   

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿಜಯಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ ಕೆ ಚೌವ್ಹಾಣ್ ಅವರು ಮಾತನಾಡಿ ಮಹಿಳಾ ಸಬಲೀಕರಣಕ್ಕೆ ಬಾಲ್ಯ ವಿವಾಹ ಅಡ್ಡಿಯಾಗಿದೆ. ಪೋಷಕರು ಹೆಣ್ಣು ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿ ಸಂಸಾರ ಬಂಧನಕ್ಕೆ ತಳ್ಳಬಾರದು, ಈ ಪಿಡುಗನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕು ಎಂದರು.  ಹೆಣ್ಣಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಮನೆ, ಶಾಲಾ-ಕಾಲೇಜಿನಲ್ಲಿ ಹೆಣ್ಣಿಗೆ ತಾರತಮ್ಯವಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.  ಸಿಂದಗಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅನಿಲ್ ಕೆ ಹಳ್ಳಿ ಮಾತನಾಡಿ ಸಮತೋಲಿತ ಆಹಾರ ಸೇವನೆಯ ಕೊರತೆಯಿಂದಾಗಿ ರಕ್ತಹೀನತೆ, ರೋಜರುಜಿನಗಳಿಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಪೌಷ್ಟಿಕ ಆಹಾರ ಸೇವನೆ ಇಂದಿನ ಅಗತ್ಯ, ಹಾಗಾಗಿ ಅಂಗನವಾಡಿಗಳಲ್ಲಿ ವಿತರಿಸಲಾಗುವ ಆಹಾರ ಪಾದಾರ್ಥಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.  ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಹರಿ ಕುಲಕರ್ಣಿ ಅವರು ಮಾತನಾಡಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಅಡಿಯಲ್ಲಿ ಗ್ರಾಮ ಮಟ್ಟದಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸೂಕ್ತ ಆಹಾರ ಸೇವನೆ ಮತ್ತು ದೈಹಿಕ ವ್ಯಾಯಾಮ ಮೈಗೂಡಿಸಿಕೊಳ್ಳಬೇಕು ಎಂದರು.   

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆಯ ಸಿ ಕೆ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಹೆಜ್ ಜಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಿ ಯು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎ ಆರ್ ಹೆಗ್ಗಣದೊಡ್ಡಿ ಅವರು ಸಹ ಮಾತನಾಡಿದರು.  ಬಾಗಲಕೋಟೆ ಜಿಲ್ಲೆಯ  ಬನಶಂಕರಿ ಜಾನಪದ ಸಂಪ್ರದಾಯ ಕಲಾ ಸಂಘ ತಂಡದ ಸದಸ್ಯರು ಸ್ವಚ್ಛತೆ, ಆರೋಗ್ಯ ರಕ್ಷಣೆ, ಪೌಷ್ಟಿಕ ಆಹಾರ ಕುರಿತಾಗಿ ಗೀತೆ ಮತ್ತು ನಾಟಕದ ಮೂಲಕ ಜಾಗೃತಿ ಮೂಡಿಸಿದರು. ಇದೇ ವೇಳೆ, ತಂಬಾಕು ಮುಕ್ತ ಯುವ ಅಭಿಯಾನ 3.0 ಅಂಗವಾಗಿ ತಂಬಾಕು ಸೇವನೆಯಿಂದ ದೂರವಿರುವಂತೆ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ತಾಯಿಯ ಹೆಸರಿನಲ್ಲಿ ಒಂದು ಗಿಡ ಅಭಿಯಾನದ ಅಂಗವಾಗಿ ಸಸಿಗಳನ್ನು ನೆಡಲಾಯಿತು.  ಆರೋಗ್ಯ ಇಲಾಖೆವತಿಯಿಂದ ಆರೋಗ್ಯ ವೈದ್ಯಾಧಿಕಾರಿಗಳಾದ ಡಾ. ರಶ್ಮಿ ಪ್ರೇಮಾ ನಾಯಕ ಅವರ ನೇತೃತ್ವದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.  

ಪೋಷಣ ಮಾಸಾಚರಣೆ ಕುರಿತು ಆಯೋಜಿಸಲಾಗಿದ್ದ ರಂಗೋಲಿ ಮತ್ತು ಪೌಷ್ಟಿಕ ಆಹಾರ ತಯಾರಿಕಾ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪುಷ್ಪವತಿ ಬಿರಾದರ, ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯು ತಾಲೂಕು ಸಂಯೋಜಕರಾದ ಪ್ರಮೋದ ಬೆಳಗಾವಿ, ಸಿ ಹಚ್ ಅಲಗೂರ, ಸುಧಾ, ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಸಹಯಕಿಯರು, ಆರೋಗ್ಯ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.