ಧಾರವಾಡ 23:ಸಾಲ, ಉಳಿತಾಯದಂತಹ ಆರ್ಥಿಕ ಚಟುವಟಿಕೆಗಳ ಮೂಲಕ ವ್ಯಕ್ತಿ ಮತ್ತು ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವುದರೊಂದಿಗೆ ಅಭಿವೃದ್ಧಿ ಸಾಧಿಸುವುದು ಬ್ಯಾಂಕ್ಗಳ ಉದ್ದೇಶವಾಗಿದ್ದರೂ ಸಾಮಾಜಿಕ ಕಾರ್ಯಗಳನ್ನು ಮಾಡುವುದು ಸಹ ನಮ್ಮ ಕರ್ತವ್ಯದ ಒಂದು ಭಾಗವಾಗಿದೆ ಎಂದು ಧಾರವಾಡ ಬ್ಯಾಂಕ್ ಆಫ್ ಬರೋಡಾ ಮುಖ್ಯ ವ್ಯವಸ್ಥಾಪಕ ಬಸವರಾಜ ಬೆಲ್ಲದ ಹೇಳಿದರು.
ಅವರು ಜುಲೈ 22 ಸೋಮವಾರ ಸಂಜೆ ಬ್ಯಾಂಕ್ ಆಫ್ ಬರೋಡಾದ 112ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ಯ ನಗರದ ಯಾಲಕ್ಕಿ ಶೆಟ್ಟರ್ ಕಾಲೋನಿಯಲ್ಲಿ ಇರುವ ಹೆಲ್ಪಂಗ್ ಹ್ಯಾಂಡ್ ಪೌಂಡೇಶನ್ದಲ್ಲಿ ನಿರಾಶ್ರಿತ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ರೇನ್ಕೋಟ, ಸ್ವೇಟರ್ ಹಾಗೂ ಪಠ್ಯಪುಸ್ತಕಗಳ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕ್ ವ್ಯವಹಾರದಿಂದ ಬರುವ ಲಾಭದಲ್ಲಿ ಸ್ವಲ್ಪ ಮೊತ್ತವನ್ನು ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿದೆ. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ವಿವಿಧ ವಿದಾಯಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮಕ್ಕಳಿಗೆ ವಿದ್ಯಾರ್ಥಿ ಜೀವನದಿಂದಲೇ ವಿಧೇಯತೆ, ಅಧ್ಯಯನಶೀಲತೆ, ಸಾಮಾಜಿಕ ಸಂಸ್ಕಾರಗಳನ್ನು ಕಲಿಸಬೇಕು. ಮಕ್ಕಳು ಚಿಕ್ಕವರಿದ್ದಾಗಿನಿಂದ ಬ್ಯಾಂಕಿಂಗ್ ವ್ಯವಹಾರ, ಬ್ಯಾಂಕಿಂಗ್ ಜ್ಞಾನ ಹೊಂದಿ ಉಳಿತಾಯ ಮನೋಭಾವ ಬೆಳೆಸಿಕೊಂಡರೆ ಅವರು ಭವಿಷ್ಯದಲ್ಲಿ ಉತ್ತಮ ಜೀವನ ಹೊಂದುತ್ತಾರೆ ಎಂದು ಬೆಲ್ಲದ ಹೇಳಿದರು.
ಕಾರ್ಯಕ್ರಮದಲ್ಲಿ ಹೆಲ್ಪಿಂಗ್ ಹ್ಯಾಂಡ್ ಪೌಂಡೇಶನ್ ಸಂಸ್ಥಾಪಕ ನವೀನ ರೆಡ್ಡಿ, ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ, ಸಂಜೀವ.ಕೆ., ನಾಗಲಿಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.