ಅಗುಳಿನ ಮೇಲೆ ತಿನ್ನುವವನ ಹೆಸರಿರುವುದು ಮರುಳೆ!

ಕಾಗೆಯೊಂದು ಅನ್ನ ಕಂಡಕೂಡಲೇ ತನ್ನ ಬಳಗವನ್ನು ಕರೆಯುವುದು ಗೊತ್ತು, ಬೆಕ್ಕು ಹಾಲು ಹಾಕಿದಾಗ ತನ್ನ ಮರಿಗಳನ್ನು ಕರೆದುಕೊಂಡು ಬರುವುದು ಗೊತ್ತು, ನಾಯಿಗೆ ಗಂಜಿಹಾಕಿದರೆ ತನ್ನ ಜೊತೆಗಿರುವ ಇನ್ನೊಂದು ನಾಯಿ ಬರದೇ ಆ ಗಂಜಿಯನ್ನು ಮುಟ್ಟದೆ ನಿಲ್ಲುವುದು ಗೊತ್ತು. ಆದರೆ ಮನುಷ್ಯ!. ಮನುಷ್ಯ ಬಹಳವೇ ಸ್ವಾರ್ಥಿ. ತನ್ನ ಹೊಟ್ಟೆ ತುಂಬಲಿ ಆನಂತರ ಉಳಿದವರಿಗೆ ಅನ್ನುವವನು. ತನ್ನದೇ ಕೂಸಿಗೆ ಎರಡು ತುತ್ತು ಸಾಕು, ನಾಲ್ಕು ತುತ್ತು ತನಗಿರಲಿ ಅನ್ನುವವನು. ಕೆಲವರಂತು ಎಂಜಲ ಕೈನಲ್ಲಿ ಕಾಗೆಯನ್ನು ಓಡಿಸುವುದಿಲ್ಲ ಎನ್ನುವ ಜನರಿದ್ದಾರೆ. ದಾನಧರ್ಮವಿರಲಿ, ಊಟದ ಸಮಯದಲ್ಲಿ ಮನೆಗೆ ಅತಿಥಿಗಳು ಬಂದರೆ ಅವರು ಮಾತು ಮುಗಿಸಿ ಹೋಗುವವರೆಗೂ ತಾವು ಊಟಕ್ಕೆ ಎದ್ದೇಳುವುದಿಲ್ಲ. ಹಸಿವಾಗಿ ಊಟ ಮಾಡೋಣ ಅನ್ನಿಸಿದರೂ ಒಳ ಮನಸ್ಸು ಇರು ಅವರು ಹೋದ ಮೇಲೆ ಮಾಡಿದರಾಯ್ತು ಎಂದುಕೊಳ್ಳುತ್ತಾರೆ. ಇಂಥಹ ಜನರಿದ್ದಾರೆಯೇ ಎಂದು ಸಾತ್ವಿಕರಿಗೆ ಅನ್ನಿಸದಬಹುದು. ಆದರೆ ಖಂಡಿತ ನಮ್ಮ ಮದ್ಯೆ ಇದ್ದೆ ಇದ್ದಾರೆ.  

ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದೆ. ನನ್ನ ಮುಒದಿನ ಸೀಟಿನಲ್ಲಿ ತಾಯಿ ಮಗು ಕುಳಿತಿದ್ದರು. ಅವರ ಪಕ್ಕ ಒಬ್ಬ ಗಂಡಸು. ಸುಮಾರು ದೂರ ಹೋದ ಮೇಲೆ ಒಂದು ಪುಟ್ಟ ಪೇಟೆ ಬಂದಿತು. ಅಲ್ಲಿ ಮುಸುಂಬೆ ಹಣ್ಣು ಬಸ್ಸಿನ ಬಳಿ ತಂದು ಮಾರುವವರು ಬಂದರು. ಈ ಗಂಡಸು ಒಂದಷ್ಟು ಹಣ್ಣನ್ನು ಖರೀದಿಸಿದ. ಬಸ್ಸು ಮತ್ತೆ ಚಲಿಸಲಾರಂಭಿಸಿತು. ಈ ವ್ಯಕ್ತಿ ಒಂದು ಹಣ್ಣನ್ನು ಸುಲಿದು ತಿನ್ನತೊಡಗಿದ. ತಾನು ತಿನ್ನುವಾಗ ತನ್ನ ಪಕ್ಕದಲ್ಲಿ ಮಗು ಇದೆ ಎಂದು ಗೊತ್ತಿದ್ದರೂ ಅತ್ತ ತಿರುಗಿ ನೋಡಲಿಲ್ಲ.  ಆ ಮಗು ಆಸೆಯಿಂದ ಅವನನ್ನೇ ನೋಡುತಿತ್ತು. ಪುಟ್ಟ ಕಂದನಿಗೆ ತಾನು ತಿನ್ನಬೇಕು ಎನ್ನುವ ಆಸೆ ಹುಟ್ಟಿ ಅಮ್ಮನಲ್ಲಿ ಮೆಲ್ಲಗೆ ಹಠ ಮಾಡಲು ಶುರು ಮಾಡಿತು. ಆ ವ್ಯಕ್ತಿ ಒಂದು ಹಣ್ಣು ಮುಗಿಸಿ ಮತ್ತೊಂದು ಹಣ್ಣು ತಿನ್ನಲಾರಂಭಿಸಿದ. ಆಗಲಾದರೂ ಒಂದು ಸೊಳೆಕೊಡಬಹುದು ಎಂದುಕೊಂಡೆ. ಆದರೆ ಆಗಲೂ ಕೊಡಲಿಲ್ಲ. ಆ ತಾಯಿಗೆ ತಾನು ಹಣ್ಣು ತೆಗೆದುಕೊಳ್ಳಬೇಕು ಅನ್ನಿಸಿದರೂ ಹೋಗುತ್ತಿದ್ದ ಬಸ್ಸನ್ನು ನಿಲ್ಲಿಸುವುದು ಹೇಗೆ? ಕೊನೆಗೆ ಉಪಾಯವಿಲ್ಲದೇ ತನ್ನ ಮಗುವನ್ನು ಕರೆದುಕೊಂಡು ಆ ಜಾಗ ಬಿಟ್ಟು ನನ್ನ ಪಕ್ಕ ಬಂದು ಕುಳಿತಿದ್ದಳು.  

ಚಿಕ್ಕಮಕ್ಕಳಿಗೆ ಹಾಗೆ ಆಸೆ ತೋರಿಸುತ್ತ ತಿನ್ನುವ ಮನಸ್ಸು ಹೇಗೆ ಬಂತು ಅನಿಸಬಹುದು. ಆದರೆ ಒಮ್ಮೆ ನಾವೇನಾದರೂ ಆ ವ್ಯಕ್ತಿಯನ್ನು ಪ್ರಶ್ನಿಸಿದ್ರೆ ‘ನಿಮ್ಮ ಮಕ್ಕಳಿಗೆ ಯಾರು ಏನೇ ಕೊಟ್ಟರೂ ತಿನ್ನಿಸುತ್ತಿರಾ, ಅಪರಿಚಿತರು ಕೊಟ್ಟರೆ ತಿನ್ನಬಾರದು ಅಂತ ತಿಳಿಸಿ ಹೇಳುವುದಿಲ್ಲವ’ ಎಂದು ಕೇಳಬಹುದು. ಯಾಕಂದರೆ ಅವನಿಗೆ ನಿಜಕ್ಕೂ ಹಣ್ಣು ಕೊಡುವ ಮನಸ್ಸಿದ್ದರೆ ಈ ರೀತಿಯಾಗಿ ನಡೆದುಕೊಳ್ಳುತ್ತಿರಲಿಲ್ಲ.  

ಸ್ವಾಮಿ ವಿವೇಕಾನಂದರು ಆಗ ತಾನೆ ಭಾರತ ಸಂಚಾರ ಮಾಡಲಾರಂಭಿಸಿದ ದಿನಗಳು. ಅವರು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಮಧ್ಯಾಹ್ನದ ಸಮಯವಾಗಿತ್ತು. ಅವರು ಹೊರಡುವಾಗ ಊಟದ ವ್ಯವಸ್ಥೆಯನ್ನು ಮಾಡಿಕೊಂಡಿರಲಿಲ್ಲ. ಆದರೆ ಅವರಿಗೆ ತನ್ನ ಹಸಿವಿನ ಬಗ್ಗೆ ಚಿಂತೆಯೂ ಇರಲಿಲ್ಲ.  ಅಷ್ಟರಲ್ಲಿ ಒಬ್ಬ ಸಹ ಪ್ರಯಾಣಿಕನು ತನ್ನ ಬುಟ್ಟಿಯಿಂದ ಪೂರಿ, ಪಲ್ಯವನ್ನು ತೆಗೆದು ತಿನ್ನತೊಡಗಿದ. ಆ ಆಹಾರದ ಪರಿಮಳ ಇಡೀ ಭೋಗಿಯನ್ನು ಪಸರಿಸಿತ್ತು.  ಸ್ವಾಮಿಜಿಯವರು ಅವನತ್ತ ನೋಡಿದರು.  ಆಗ ಆತ ಸ್ವಾಮಿಜಿಯವರನ್ನು ಉದ್ದೇಶಿಸಿ ‘ನೀವು ಯಾಕೆ ನಾನು ತಿನ್ನುವುದನ್ನೇ ನೋಡುತ್ತಿದ್ದೀರಿ. ಆದರೆ ನಾನು ನಿಮಗೆ ಒಂದು ಪುರಿಯನ್ನು ಕೊಡುವುದಿಲ್ಲ. ನಿಮ್ಮಂಥಹ ಕಾವಿ ಬಟ್ಟೆ ತೊಟ್ಟ ಸನ್ಯಾಸಿಗಳು ಕೆಲಸಕ್ಕೆ ಬಾರದವರು. ಸಮಾಜಕ್ಕೆ ಒಂದು ಹೊರೆ’ ಎಂದುಬಿಟ್ಟ.  ಆಗ ವಿವೇಕಾನಂದರು ಮುಗುಳುನಕ್ಕು ‘ನಾನು ನಿಮ್ಮನ್ನು ಕೇಳಲಿಲ್ಲ ಸ್ವಾಮಿ.  ಇಡೀ ಪ್ರಪಂಚವನ್ನು ಪೋಶಿಸುವ ಪರಮಾತ್ಮ ನನಗೂ ಹೇಗಾದರೂ ಊಟ ಕೊಡಿಸಬಹುದು. ಪೂರಿ ಪಲ್ಯ ಅಲ್ಲದೇ ಹೋದರೂ ಮತ್ತೇನೋ ನನಗೆ ಸಿಗಬಹುದು ಎಂದು ನಂಬಿದ್ದೇನೆ. ನೀವು ಅರಾಮಾಗಿ ತಿನ್ನಿ.’ ಎಂದರು.  

ಹಾಗೆ ರೈಲು ಚಲಿಸುತ್ತಿರುವಾಗಲೇ ಆತ ಪೂರಿ ಪಲ್ಯ ತಿಂದು ಮುಗಿಸಿದ. ಅಷ್ಟರಲ್ಲಿ ಒಂದು ಸ್ಟೇಷನ್ ಬಂದಿತು. ಆಗ ರೈಲಿನ ಹೊರಗೊಬ್ಬ ಯಾರನ್ನೋ ಹುಡುಕುವುದು ಕಾಣಿಸಿತು. ಅವನ ತಲೆಯ ಮೇಲಿನ ಬುಟ್ಟಿಯಲ್ಲಿ ಬಾಳೆ ಹಣ್ಣುಳಿದ್ದವು.  ಆ ಬುಟ್ಟಿಯನ್ನು ಹೊತ್ತುಕೊಂಡು ಬೋಗಿಯೊಳಕ್ಕೆ ಬಂದ. ಅವನು ಎಲ್ಲರನ್ನು ನೋಡುತ್ತ ವಿವೇಕಾನಂದರ ಬಳಿ ಬಂದು ನೋಡಿದ. ಕಾವಿ ಬಟ್ಟೆ ತೊಟ್ಟ ಸನ್ಯಾಸಿಯನ್ನು ಕಂಡು ಅವನು ಬುಟ್ಟಿಯನ್ನು ಪಕ್ಕಕ್ಕೆ ಇಟ್ಟು ನಮಸ್ಕರಿಸಿ ‘ಮಹಾತ್ಮರೆ ದಯವಿಟ್ಟು ನಾನು ತಂದಿರುವ ಆಹಾರವನ್ನು ತೆಗೆದುಕೊಳ್ಳಿ. ನೀವು ಹಸಿದಿದ್ದೀರಿ ಎಂದು ನನಗೆ ತಿಳಿದಿದೆ. ಇಲ್ಲ ಅನ್ನದೇ ಸ್ವೀಕರಿಸಿ’ ಎಂದ. ಇದನ್ನು ಕಂಡ ಆ ಸಹಪ್ರಯಾಣಿಕನಿಗೂ ಮತ್ತು ಸ್ವಾಮಿಜಿಯವರಿಗೂ ಆಶ್ಚರ್ಯವಾಗಿತ್ತು. ಆಗ ಸ್ವಾಮಿಜಿಯವರು ‘ನೀನು ತನಗೆ ಪರಿಚಯವಿಲ್ಲದ ವ್ಯಕ್ತಿ. ಇದನ್ನು ನನಗೇ ಕೊಡಲು ಬಂದಿದ್ದಿಯೆಂದು ಹೇಗೆ ನಂಬುವುದು. ಬಹುಶಹ ಬೇರೆಯವರಿಗೆ ಕೊಡಲು ತಂದಿರುವೆಯ ನೋಡು’ ಎಂದರು. ಆತ ‘ಇಲ್ಲ ಸ್ವಾಮಿ ನಿನ್ನೆ ರಾತ್ರಿ ಯಾರೋ ನನ್ನ ಕನಸಿನಲ್ಲಿ ಬಂದು ಇಂದು ನಿಮ್ಮೂರಿಗೆ ಮಧ್ಯಾಹ್ನದ ಸಮಯಕ್ಕೆ ಬರುವ ರೈಲಿನಲ್ಲಿ ಒಬ್ಬ ಕಾವಿ ಬಟ್ಟೆ ತೊಟ್ಟವರು ಬರುತ್ತಾರೆ. ಅವರಿಗೆ ಭೋಜನವನ್ನು ಅರ​‍್ಿಸು ಎಂದು ಹೇಳಿದಂತಾಯಿತು. ಅದು ಸತ್ಯವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ ನಾನು ಅದನ್ನು ನಂಬಿ ನಮ್ಮ ತೋಟದ ಬಾಳೆ ಹಣ್ಣನ್ನು ತಂದಿದ್ದೆ. ಆದರೆ ಸ್ವಾಮಿ ನೀವು ಕಾಣಿಸಿದಿರಿ. ಕನಸಲ್ಲಿ ಹೇಳಿದ ಸ್ವಾಮಿಗಳು ನೀವೇ ಇರಬೇಕೆಂದುಕೊಂಡಿದ್ದೇನೆ. ಇಲ್ಲ ಅನ್ನದೇ ಇದನ್ನು ತೆಗೆದುಕೊಳ್ಳಿ’ ಎಂದು ಹೇಳಿ ಮತ್ತೊಮ್ಮೆ ನಮಸ್ಕಾರ ಮಾಡಿ ನಡೆದು ಬಿಟ್ಟ.  

ರೈಲು ಮತ್ತೆ ಹೊರಟಿತು. ಸ್ವಾಮಿಯವರು ಆ ಬುಟ್ಟಿಯನ್ನು ತೆಗೆದು ನೋಡಿದರು. ಅದರಲ್ಲಿ ರಸವತ್ತಾದ ಬಾಳೆ ಹಣ್ಣುಗಳಿದ್ದವು. ಅದನ್ನು ಕಂಡ ಆ ಸಹ ಪ್ರಯಾಣಿಕನಿಗೆ ಆಸೆಯಾಯಿತು. ಸ್ವಾಮಿಗಳು ಆ ಭೋಗಿಯವರಿಗೆಲ್ಲ ಒಂದೊಂದು ಬಾಳೆ ಹಣ್ಣು ನೀಡಿ ಕೊನೆಗೆ ಈತನಿಗೂ ‘ನಾನು ನಿನ್ನಂತೆ ಹೇಳುವುದಿಲ್ಲ. ತೆಗೆದುಕೊಳ್ಳಿ. ಯಾರ ಊಟ ಎಲ್ಲಿ ಬರೆದಿದೆ ಅಂತ ತಿಳಿದಿರುವುದಿಲ್ಲ. ನಿಮ್ಮ ಪುರಿ ಪಲ್ಯ ತಿಂದಿದ್ದರೆ ನನಗೆ ಈ ಹಣ್ಣಿನ ರುಚಿ ಕಡಿಮೆ ಅನ್ನಿಸುತ್ತಿತ್ತೇನೋ. ಆದರೆ ಈಗ ಇದರ ರುಚಿ ಅಮೃತಕ್ಕೆ ಸಮಾನವಾಗಿದೆ’ ಎಂದರು. ಆತ ಸಂಕೋಚ ಭಾವದಿಂದ ಹಣ್ಣನ್ನು ಪಡೆದ. 

ಬದುಕಿನಲ್ಲಿ ಎಲ್ಲವೂ ನಮಗೆ ಮಾತ್ರ ಸಿಗಬೇಕು ಎನ್ನುವ ಯೋಚನೆಯಲ್ಲಿಯೇ ಇರುತ್ತೇವೆ. ನಮಗೆ ಸಿಕ್ಕಿದ್ದನ್ನು ಹಂಚಿಕೊಳ್ಳಬೇಕು ಎನ್ನುವ ಸಣ್ಣ ಯೋಚನೆಯನ್ನು ಮಾಡುವುದೇ ಇಲ್ಲ. ಒಂದೊಂದು ಅಗುಳಿನ ಮೇಲೆ ತಿನ್ನುವವನ ಹೆಸರು ಇರುತ್ತೆ ಪುಟ್ಟ ಅಂತ ನಾನು ಚಿಕ್ಕವಳಿರುವಾಗ ನಮ್ಮ ಅಜ್ಜ ಹೇಳಿದ ಮಾತು ನೆನಪಾಗುತ್ತದೆ. ಸೃಷ್ಟಿಯಲ್ಲಿ ಇರುವುದೆಲ್ಲ ನಮ್ಮ ಸ್ವತ್ತಲ್ಲ. ಸೃಷ್ಟಿಯ ಭಾಗವಾಗಿ ನಾವು ಇದ್ದೇವೆ ಅಷ್ಟೆ. ಇರುವ ತುತ್ತಲ್ಲಿ ಪಕ್ಕದಲ್ಲಿದ್ದವರಿಗೆ ಒಂದಗಳು ನೀಡಿದರೆ ಅದೆಷ್ಟು ಸಮಯ ಸಂತೃಪ್ತಿಯಲ್ಲಿ  ನಮ್ಮನ್ನು ಇಟ್ಟಿರುತ್ತದೆ ಎಂದು ಅನುಭವಿಸಿಯೇ ನೋಡಬೇಕು. 

- * * * -