ಸಿಡ್ನಿ, ಜ 21 : ಈಗಾಗಲೇ ತೀವ್ರ ಕಾಡ್ಗಿಚ್ಚಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾದಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆ ಹಾಗೂ ಚಂಡಮಾರುತದಿಂದ ಮತ್ತಷ್ಟು ಹಾನಿಯಾಗಿದ್ದು, ಸುಮಾರು 30 ಸಾವಿರ ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡು ಕತ್ತಲಲ್ಲಿ ಮುಳುಗಿವೆ.
ಕಾನ್ಬೆರಿಯಿಂದ ನ್ಯೂ ಸೌತ್ ವೇಲ್ಸ್ (ಎನ್ ಎಸ್ ಡಬ್ಲ್ಯು) ನತ್ತ ಸಾಗಿರುವ ಚಂಡಮಾರುತ, ಕ್ವೀನ್ಸ್ ಲ್ಯಾಂಡ್ ಮತ್ತು ವಿಕ್ಟೋರಿಯಾಕ್ಕೂ ಹಾನಿಯನ್ನುಂಟುಮಾಡಿದೆ.
ರಾಷ್ಟ್ರೀಯ ತುರ್ತು ಸೇವಾ ಇಲಾಖೆಯ ಪ್ರಕಾರ, ರಾತ್ರಿಯಿಡೀ ನೆರವಾಗಿ ಬೇಡಿ 800 ಕರೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಬಹುತೇಕರು ಮರಗಳು ಉರುಳಿದ ದೂರುಗಳಾಗಿದ್ದವು.
ಕೆಲವಡೆ ಜನರಿದ್ದ ಕಾರುಗಳ ಮೇಲೆ ಕೂಡ ಮರಗಳು ಬಿದ್ದಿವೆ. ಅಂತಹ ವ್ಯಕ್ತಿಗಳನ್ನು ರಕ್ಷಿಸಲಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಬ್ಲೂ ಮೌಂಟೇನ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಮಳೆ-ಮಿಂಚಿಗೆ ಸಿಲುಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರಿ ಗುಡುಗು ಮಿಂಚಿನ ಪರಿಣಾಮವಾಗಿ ಕ್ವೀನ್ಸ್ ಲ್ಯಾಂಡ್ ಎನ್ ಎಸ್ ಡಬ್ಲ್ಯು ಸೇರಿದಂತೆ ಹಲವಡೆ 30 ಸಾವಿರಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡು ಕತ್ತಲಲ್ಲಿ ಮುಳುಗಿವೆ ಎಂದು ಇಲಾಖೆ ತಿಳಿಸಿದೆ.