ಮುಡಾ ಮಾಜಿ ಆಯುಕ್ತ ಮನೆ ಮೇಲೆ ಇಡಿ ದಾಳಿ
ಬೆಂಗಳೂರು 28: ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಸೈಟು ಹಂಚಿಕೆ ಹಗರಣದ ತನಿಖೆ
ಮತ್ತಷ್ಟು ಚುರುಕುಗೊಂಡಿದ್ದು, ಸೋಮವಾರ ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮತ್ತು ಬಿಲ್ಡರ್ ಎನ್. ಮಂಜುನಾಥ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಇಡಿ ಅಧಿಕಾರಿಗಳ ದಾಳಿಯ ವೇಳೆ ದಿನೇಶ್ ಕುಮಾರ್ ವಾಕಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಡಿ ಅಧಿಕಾರಿಗಳು ಮನೆಗೆ ಬಂದ ವಿಚಾರ ತಿಳಿದು ವಾಕಿಂಗ್ ಮಾಡುತ್ತಿದ್ದ ಸ್ಥಳದಿಂದಲೇ ದಿನೇಶ್ ಕುಮಾರ್ ಪರಾರಿಯಾಗಿದ್ದಾರೆ.
ಇನ್ನು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಬಿಲ್ಡರ್ ಎನ್. ಮಂಜುನಾಥ್ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ್ದರು. ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು ಮತ್ತು ಇತ್ತೀಚಿಗೆ ಅವರನ್ನು ಅಮಾನತು ಸಹ ಮಾಡಿದೆ.