ಮುಡಾ ಮಾಜಿ ಆಯುಕ್ತ ಮನೆ ಮೇಲೆ ಇಡಿ ದಾಳಿ

ಬೆಂಗಳೂರು 28: ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಸೈಟು ಹಂಚಿಕೆ ಹಗರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಸೋಮವಾರ ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮತ್ತು ಬಿಲ್ಡರ್​ ಎನ್​. ಮಂಜುನಾಥ್​ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಇಡಿ ಅಧಿಕಾರಿಗಳ ದಾಳಿಯ ವೇಳೆ ದಿನೇಶ್‌ ಕುಮಾರ್‌ ವಾಕಿಂಗ್‌ ಮಾಡುತ್ತಿದ್ದರು ಎನ್ನಲಾಗಿದೆ. ಇಡಿ ಅಧಿಕಾರಿಗಳು ಮನೆಗೆ ಬಂದ ವಿಚಾರ ತಿಳಿದು ವಾಕಿಂಗ್‌ ಮಾಡುತ್ತಿದ್ದ ಸ್ಥಳದಿಂದಲೇ ದಿನೇಶ್‌ ಕುಮಾರ್‌ ಪರಾರಿಯಾಗಿದ್ದಾರೆ.

ಇನ್ನು ಬೆಂಗಳೂರಿನ ಜೆ.ಪಿ‌.ನಗರದಲ್ಲಿರುವ ಬಿಲ್ಡರ್​ ಎನ್​. ಮಂಜುನಾಥ್​ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ್ದರು. ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು ಮತ್ತು ಇತ್ತೀಚಿಗೆ ಅವರನ್ನು ಅಮಾನತು ಸಹ ಮಾಡಿದೆ.