ಬೆಂಗಳೂರು, ನ. 29-ಕೆನಡಾ ದೇಶದಿಂದ ಭಾರತಕ್ಕೆ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ, 1 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಕೋಲ್ಕತ್ತಾ ಮೂಲದ ಆತೀಫ್ ಸಲೀಂ ಎಂಬಾತ ಡಾರ್ಕ್ ವೆಬ್ ಸೈಟ್ ಮೂಲಕ ಕೆನಡಾ ಮೂಲದ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಂಪರ್ಕಿಸಿ ಗಾಂಜಾ ಚಾಕೊಲೇಟ್ ಮತ್ತು ಆಶಿಷ್ ಆಯಿಲ್ ಎಂಬ ಮಾದಕ ವಸ್ತುವಿರುವ ಇ-ಸಿಗ್ರೇಟ್ ಟ್ಯೂಬ್ ಗಳನ್ನು ತರಿಸಿಕೊಳ್ಳುತ್ತಿದ್ದ. ಅವುಗಳನ್ನು ಕೆನಡಾದ ವ್ಯಕ್ತಿ ಸೂಚಿಸುವ ವಿಳಾಸಕ್ಕೆ ಅಮೆಜಾನ್ ಕವರ್ ಗಳಿಂದ ಪ್ಯಾಕ್ ಮಾಡಿ ಕೊರಿಯರ್ ಮೂಲಕ ಬೆಂಗಳೂರು ಹಾಗೂ ದೇಶದ ನಗರಗಳಿಗೆ ಸಾಗಾಟ ಮಾಡುತ್ತಿದ್ದ. ಅಲ್ಲದೇ ಒಟ್ಟಾರೆ ಕಳುಹಿಸಿದ ಮಾದಕ ವಸ್ತುಗಳಲ್ಲಿ ಕಾಲು ಭಾಗದಷ್ಟು ತಾನೇ ಇಟ್ಟುಕೊಳ್ಳುತ್ತಿದ್ದ ಎಂದು ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಸ್ಟಮ್ ಅಧಿಕಾರಿಗಳಿಗೆ ಅನುಮಾನ ಬಾರದಂತೆ ಮಕ್ಕಳ ಹಾಲಿನ ಪೌಡರ್ ಡಬ್ಬಿಗಳಲ್ಲಿ ಹೈಡ್ರೋ ಗಾಂಜಾ ಬಚ್ಚಿಟ್ಟು ಕೆನಡಾದಿಂದ ಕೊರಿಯರ್ ಮೂಲಕ ಭಾರತಕ್ಕೆ ರವಾನಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಹಾಲಿನ ಡಬ್ಬಿಗಳಲ್ಲಿಟ್ಟಿದ್ದ 14 ಹೈಡ್ರೋ ಗಾಂಜಾ ತೂಕ 2 ಕೆಜಿ 750ಗ್ರಾಂ ಆಗಿದ್ದು, ಪ್ರತಿ ಗ್ರಾಂ ಗೆ 3-4 ಸಾವಿರ ರೂ ಮಾರಾಟವಾಗುತ್ತಿತ್ತು ಎಂದು ತಿಳಿದು ಬಂದಿದೆ.
ಬಂಧಿತನಿಂದ 12 ಚಾಕ್ ಲೇಟ್ ಪ್ಯಾಕೇಟ್, 100 ಸಿಗರೇಟ್ ಟ್ಯೂಬ್, 3 ಚಿಕ್ಕ ಗಾಂಜಾ ಕ್ರಷರ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರು, ಒಂದು ಬೈಕ್, ವೇಯಿಂಗ್ ಮಿಷಿನ್ ಹಾಗೂ ನಗದು 1 ಲಕ್ಷ ರೂ ವಶಪಡಿಸಿಕೊಂಡಿದ್ದು, ಅಂದಾಜು ವಶಪಡಿಸಿಕೊಂಡ ಎಲ್ಲಾ ಮಾದಕ ವಸ್ತುಗಳ ಮೌಲ್ಯ 1 ಕೋಟಿ ರೂ ಗಿಂತ ಅಧಿಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.