ವಾರದ ಸಂತೆ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ
Dried chilies at the weekly market
ಮಾಂಜರಿ 23 : ಚಿಕ್ಕೋಡಿ ಪಟ್ಟಣ ಸೇರಿ ತಾಲೂಕಿನ ಹಲವಾರು ಗ್ರಾಮಗಳ ವಾರದ ಸಂತೆ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ದರ 500 ರೂ. ಗಡಿ ದಾಟಿದ್ದು, ಗ್ರಾಹಕರಿಗೆ ಘಾಟು ತಾಗಿದೆ. ನೀರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದ ಹಿನ್ನೆಲೆಯಲ್ಲಿ ಮೆಣಸಿನಕಾಯಿ ದರ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಅಂತಾ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಬೇಸಿಗೆ ಶುರುವಾದರೆ ಸಾಕು ಉತ್ತರ ಕರ್ನಾಟಕ ಜನರು ವರ್ಷಪೂರ್ತಿ ಆಗುವಷ್ಟು ಖಾರವನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಈಗ ಬೇಸಿಗೆ ಶುರುವಾಗಿದ್ದು, ಮೆಣಸಿನಕಾಯಿ ತರಲು ಮಾರುಕಟ್ಟೆಗೆ ಬರುವ ಪಟ್ಟಣ ಹಾಗೂ ಗ್ರಾಮೀಣ ಭಾಗದ ಗ್ರಾಹಕರಿಗೆ ದರ ಕೇಳಿ ತಲೆ ತಿರುಗುತ್ತಿದೆ. ಕಳೆದ ವರ್ಷ ಕೆಜಿಗೆ 200-300 ರೂಪಾಯಿಗೆ ಮಾರಾಟವಾಗುತ್ತಿದ್ದ ಮೆಣಸಿನಕಾಯಿ ಈಗ 500 ರೂ. ಗಡಿ ದಾಟಿದ್ದು ಜನರನ್ನು ಚಿಂತೆಗೀಡು ಮಾಡಿದೆ.
ಸದ್ಯ ಬೆಳಗಾವ ನಂಬರ್ 1 ಕ್ವಾಲಿಟಿ 650-700., 3.2 400-450 . ಮತ್ತು ಗುಂಟೂರ ಜವಾರಿ ಮೆಣಸಿನಕಾಯಿ 350 ರೂ. ಮಾರಾಟವಾಗುತ್ತಿದೆ. ಗ್ರಾಹಕರು ದರ ಕಡಿಮೆ ಮಾಡುವಂತೆ ವ್ಯಾಪಾರಿಗಳೊಡನೆ ಚೌಕಾಶಿ ಮಾಡುತ್ತಿದ್ದಾರೆ. ಆದರೆ, ವ್ಯಾಪಾರಿಗಳು ನಮಗೆ ನಷ್ಟ ಮಾಡಿಕೊಂಡು ಹೇಗೆ ಕೊಡೋಣ ಎನ್ನುತ್ತಿದ್ದಾರೆ. ದರ ದುಪ್ಪಟ್ಟಾಗಿದ್ದರಿಂದ 10 ಕೆ.ಜಿ ಖರೀದಿಸುವವರು 5 ಕೆಜಿ ಮಾತ್ರ ಮನೆಗೆ ಒಯ್ಯುತ್ತಿದ್ದಾರೆ. ಬಹಳಷ್ಟು ಜನರು ದರ ಕೇಳಿ ಖಾಲಿ ಕೈಯಲ್ಲಿ ಮುಂದೆ ಹೋಗುತ್ತಿದ್ದಾರೆ.
ವ್ಯಾಪಾರಿಗಳು ಹುಬ್ಬಳ್ಳಿ, ಕುಂದಗೋಳ, ಅಣ್ಣಿಗೇರಿ, ಸಂಶಿ, ನವಲಗುಂದ, ನರಗುಂದ, ಶಿರಗುಪ್ಪಿ, ಹಾವೇರಿ, ಬ್ಯಾಡಗಿ, ಸಂಕೇಶ್ವರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಮೆಣಸಿನಕಾಯಿ ತರುತ್ತಾರೆ. ಚಿಕ್ಕೋಡಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ವಾರದ ಸಂತೆಯ ಎಲ್ಲಿ ಕೆಳಭಾಗಗಳಲ್ಲಿ ಮತ್ತು ಪ್ರಮುಖ ಚೌಕ ದಲ್ಲಿ ಇರುವ ಮಂದಿರ ಮುಂಭಾಗ ಸೇರಿ ಮತ್ತಿತರ ಕಡೆಗಳಲ್ಲಿ ಸೀಜನ್ ನಲ್ಲಿ ನಿತ್ಯವೂ ಮೆಣಸಿನಕಾಯಿ ವ್ಯಾಪಾರ ನಡೆಯುತ್ತಿದೆ.
ಬ್ಯಾಡಗಿಯ ವ್ಯಾಪಾರಿ ಹನುಮಂತಪ್ಪ ಮಾತನಾಡಿ, ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಎರಡೂರು ವರ್ಷದ ಹಳೆಯ ಮೆಣಸಿನಕಾಯಿ 300 ರೂ., ಈ ವರ್ಷದ ತಾಜಾ ಮೆಣಸಿನಕಾಯಿ 500 ರೂ. ವರೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ನಂ.1 ಮೆಣಸಿನಕಾಯಿ ಅಬ್ಬಬ್ಬಾ ಎಂದರೆ 300 ರೂ.ವರೆಗೆ ಮಾರಾಟವಾಗಿತ್ತು. ಈ ವರ್ಷ ದರ ದುಪ್ಪಟ್ಟಾಗಿದೆ. ಹವಾಮಾನ ವೈಪರಿತ್ಯದಿಂದ ಸಿಕ್ಕಾನ ಮಳೆಯಾಗಿ, 50 ಚೀಲ ಇಳುವರಿ ಬರುವಲ್ಲಿ 25 ಚೀಲ ಬಂದಿದೆ. ಹೀಗಾಗಿ ರೇಟ್ ಡಬಲ್ ಆಗಿದೆ. ಹಾಗಾಗಿ,ವ್ಯಾಪಾರ ಕಮ್ಮಿ ಇದೆ. ಹಿಂದಿನ ವರ್ಷ ದಿನಕ್ಕೆ ಮೂರು ಚೀಲ ವ್ಯಾಪಾರ ಆಗುತ್ತಿತ್ತು. ಈಗ ಒಂದು ಚೀಲ ಆಗುತ್ತಿದೆ ಎಂದರು.
ಹೋದ ವರ್ಷವೂ ನಿಮ್ಮ ಕಡೆಯೇ ಮೆಣಸಿನಕಾಯಿ ಒಯ್ದಿದ್ದೇವೆ. ಈ ವರ್ಷ ಇಷ್ಟು ಯಾಕೆ ಡಬಲ್ ರೇಟ್ ತೆಗೆದುಕೊಳ್ಳುತ್ತಿದ್ದಿರಿ ಅಂತಾ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಎಲ್ಲಾ ವಿವರಿಸಿ ವ್ಯಾಪಾರ ಮಾಡುವಷ್ಟರಲ್ಲಿ ಸಾಕಾಗುತ್ತಿದೆ. ಜನವರಿಯಿಂದ ಜುಲೈವರೆಗೆ ಮೆಣಸಿನಕಾಯಿ ವ್ಯಾಪಾರದ ಸೀಜನ್ ಇರುತ್ತದೆ. ಈ ಸಮಯದಲ್ಲಿ ಜನರು ಮೆಣಸಿನಕಾಯಿ ಒಯ್ದು, ಒಣಗಿಸಿ, ಮಸಾಲೆ ಸೇರಿಸಿ ಖಾರ ತಯಾರಿಸಿಕೊಳ್ಳುತ್ತಾರೆ ಎನ್ನುತ್ತಾರೆ ವ್ಯಾಪಾರಿ ಹನುಮಂತಪ್ಪ .
ಮೆಣಸಿನಕಾಯಿ ಖರೀದಿಗೆ ಬಂದಿದ್ದ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಅನಿತಾ ಕೋಳಿ ಎಂಬವರು ಮಾತನಾಡಿ, ಹೋದ ವರ್ಷ ಕೆಜಿಗೆ 200 ರೂ. ಇತ್ತು. ಈ ವರ್ಷ 300 ರೂ. ಆಗಿದೆ. ದರ ಹೆಚ್ಚಾಗಿದೆ ಅಂತಾ ಸುಮ್ಮನೇ ಇರೋದಿಕ್ಕೂ ಆಗುವುದಿಲ್ಲ. ದಿನನಿತ್ಯ ಅಡುಗೆಗೆ ಖಾರ ಬೇಕೇಬೇಕು. ಹಾಗಾಗಿ, 19 ಕೆಜಿ ಮೆಣಸಿನಕಾಯಿ ತೆಗೆದುಕೊಂಡೆವು. ರೇಟ್ ಕಮ್ಮಿ ಮಾಡುವಂತೆ ಕೇಳಿಕೊಂಡೆವು. ಬೇಕಾದರೆ ಖರೀದಿಸಿ, ಬೇಡವಾದರೆ ಬಿಡಿ ಅಂತಾ ವ್ಯಾಪಾರಿಗಳು ಹೇಳುತ್ತಿದ್ದಾರೆ. ಅವರೊಂದಿಗೆ ಹೆಚ್ಚೇನು ಚೌಕಾಶಿ ಮಾಡುವುದು ಅಂತಾ ಅವರು ಹೇಳಿದಷ್ಟು ದುಡ್ಡು ಕೊಟ್ಟು ಮೆಣಸಿನಕಾಯಿಯಿದೆ ಕೊಳ್ಳುತ್ತಿದ್ದೇವೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 