ವೈದ್ಯನಾಗುವ ಕನಸು; ಆರ್ಥಿಕ ಸಂಕಷ್ಟದಲ್ಲಿ ಪ್ರತಿಭಾವಂತ ವಿದ್ಯಾರ್ಥಿ

ವೈದ್ಯನಾಗುವ ಕನಸು; ಆರ್ಥಿಕ ಸಂಕಷ್ಟದಲ್ಲಿ ಪ್ರತಿಭಾವಂತ ವಿದ್ಯಾರ್ಥಿ  Dream of becoming a doctor; talented student facing financial hardship


ಹೂವಿನಹಡಗಲಿ, ಆ. 28: ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿ ಭಾರತ್ ಕಣವಿ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ಕಂಡಿದ್ದು, ಆರ್ಥಿಕ ಸಂಕಷ್ಟದಿಂದಾಗಿ ದಾನಿಗಳ ನೆರವಿನ ನೀರೀಕ್ಷೆಯಲ್ಲಿದ್ದಾರೆ.  

ತಾಲೂಕಿನ ಹೊಳಲು ಗ್ರಾಮದ ಈರ​‍್ಪ ಕಣವಿ ಅವರ ಪುತ್ರ ಭಾರತ್, ಪಿಯುಸಿ ಪರೀಕ್ಷೆಯಲ್ಲಿ ಶೇ. 97.6 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೆ, ನೀಟ್ ಪರೀಕ್ಷೆಯಲ್ಲಿ 99,000ನೇ ರ್ಯಾಂಕ್ ಹಾಗೂ ಸಿಇಟಿ ಪರೀಕ್ಷೆಯಲ್ಲಿ 5,800ನೇ ರ್ಯಾಂಕ್ ಪಡೆದಿದ್ದಾರೆ. ಅವರ ಪ್ರತಿಭೆಗೆ ಫಲವಾಗಿ ಕೊಪ್ಪಳದ ಕೆಐಎಂಎಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ದೊರೆತಿದೆ.  

ಬಡವರು ಹಾಗೂ ಗ್ರಾಮೀಣ ಜನರಿಗೆ ವೈದ್ಯರಾಗಿ ಸೇವೆ ಸಲ್ಲಿಸಬೇಕು ಎಂಬುದು ಭಾರತ್ ಅವರ ಆಶಯವಾಗಿದೆ. ಆದರೆ ವೈದ್ಯಕೀಯ ಶಿಕ್ಷಣದ ಶುಲ್ಕ, ವಸತಿ, ಪುಸ್ತಕಗಳು ಹಾಗೂ ಇತರ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ.  

ಕೂಲಿ ಮಾಡಿ ಮಕ್ಕಳನ್ನು ಓದಿಸುತ್ತಿರುವ ತಂದೆ  

ಭಾರತ್ ಅವರ ತಂದೆ ಈರ​‍್ಪ ಕಣವಿ ಅವರಿಗೆ ಹೊಳಲು ಗ್ರಾಮದಲ್ಲಿ ಎರಡು ಎಕರೆ ಜಮೀನಿದ್ದು, ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದಾರೆ. ಅವರಿಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದು, ಒಂದು ಕಾಲಿನ ಗ್ಯಾಂಗ್ರೀನ್ನಿಂದಾಗಿ ಕಾಲು ಕತ್ತರಿಸಬೇಕಾಗಿದೆ. ಹೀಗಾಗಿ ದೈಹಿಕವಾಗಿ ಯಾವುದೇ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.  

ಇತ್ತ ಭಾರತ್ ಅವರ ಸಹೋದರಿ ಪ್ಯಾರಾ ಮೆಡಿಕಲ್ ಶಿಕ್ಷಣ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಗೆ ದೊರೆಯುವ ಸಂಬಳದಿಂದಲೇ ಕುಟುಂಬದ ಜೀವನ ನಿರ್ವಹಣೆ ನಡೆಯುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ್ ಅವರ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ದೊಡ್ಡ ಹೊರೆಯಾಗಿದೆ.  

ದಾನಿಗಳ ನೆರವಿನ ನೀರೀಕ್ಷೆ  

ಭಾರತ್ ಅವರ ಪ್ರತಿಭೆ ಹಾಗೂ ವೈದ್ಯನಾಗಿ ಗ್ರಾಮೀಣ ಜನರಿಗೆ ಸೇವೆ ಸಲ್ಲಿಸುವ ಅವರ ಉದ್ದೇಶವನ್ನು ಪರಿಗಣಿಸಿ, ಸಹೃದಯ ದಾನಿಗಳು,  ಸಮಾಜದ ನೆರವು ನೀಡುವವರು ಕೈಜೋಡಿಸಬೇಕು ಎಂದು ಕುಟುಂಬದವರು ಮನವಿ ಮಾಡಿದ್ದಾರೆ.  

“ಪ್ರತಿಭೆ ಇದ್ದರೂ ಆರ್ಥಿಕ ಅಡಚಣೆಯಿಂದ ಭಾರತ್ ಅವರ ವೈದ್ಯಕೀಯ ಶಿಕ್ಷಣಕ್ಕೆ ತೊಂದರೆಯಾಗಬಾರದು. ವೈದ್ಯನಾಗಿ ಬಡವರು ಹಾಗೂ ಗ್ರಾಮೀಣ ಜನರಿಗೆ ಸೇವೆ ಸಲ್ಲಿಸಬೇಕು ಎಂಬ ಅವರ ಕನಸಿಗೆ ಸಮಾಜ ಬೆಂಬಲ ನೀಡಬೇಕು,” ಎಂದು ಕುಟುಂಬದವರು ಮನವಿ ಮಾಡಿದ್ದಾರೆ.  

ಭಾರತ್ ಅವರ ವೈದ್ಯಕೀಯ ಶಿಕ್ಷಣಕ್ಕೆ ನೆರವು ದೊರೆತರೆ, ಆರ್ಥಿಕ ಸಂಕಷ್ಟದ ನಡುವೆಯೂ ಉತ್ತಮ ಸಾಧನೆ ಮಾಡಿರುವ ಈ ಪ್ರತಿಭಾವಂತ ವಿದ್ಯಾರ್ಥಿಯ ವೈದ್ಯನಾಗುವ ಕನಸು ನನಸಾಗಲಿದೆ.