ಬೆಂಗಳೂರು. ಸೆ 11: ಪರಿಶಿಷ್ಟ ಜನಾಂಗದ ಶ್ರೋಯೋಭಿವೃದಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ಸೇರಿ ಮೂವರು ಗಣ್ಯರನ್ನು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಕಮಲಾ ಹಂಪನಾ, ಸಾಮಾಜಿಕ ಕ್ಷೇತ್ರದಲ್ಲಿ ಗುರುತರವಾಗಿ ಸೇವೆಸಲ್ಲಿಸುತ್ತಿರುವ ಓಬಳಪ್ಪ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಜಿ. ರಂಗಯ್ಯ ಅವರನ್ನು ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ವಿಶ್ರಾಂತ ಕುಲಪತಿಗಳು ಹಾಗು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ನಿರಂಜನ್ ಎಸ್. ಆರ್. ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಮೂವರು ಗಣ್ಯರನ್ನು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸರ್ಕಾರವು ಈ ವರದಿಯನ್ನು ಅಂಗೀಕರಿಸಿದೆ. ರಾಜ್ಯ ಮಟ್ಟದ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ನಾಡಿದ್ದು ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಯ್ರಕಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿಯು ತಲಾ 20 ಗ್ರಾಂ ಚಿನ್ನದ ಪದಕ ಹಾಗು 5 ಲಕ್ಷ ನಗದು ಒಳಗೊಂಡಿರುತ್ತದೆ ಎಂದು ಅವರು ಪ್ರಕಟಿಸಿದರು.
ಡಾ. ಕಮಲಾ ಹಂಪನ ಅವರು ಕರ್ನಾಟಕದ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದಾರೆ. ನಿರಂತರ ಪರಿಶ್ರಮ, ನಾಡುನುಡಿಯ ಬಗೆಗಿನ ಅನುಪಮ ಪ್ರೀತಿ, ಅವರ ಸಾಹಿತ್ಯಿಕ ಸಾಧನೆಯಿಂದಲೇ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶ್ರೀ ಓಬಳಪ್ಪ ಅವರು ನಿವೃತ್ತ ಕೃಷಿ ಅಧಿಕಾರಿಯಾಗಿದ್ದು, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಆಡಳಿತಾಧಿಕಾರಿಯಾಗಿ, ಹರಿಹರದ ವಾಲ್ಮೀಕಿ ಹಾಸ್ಟಲ್ ಸಮಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. ವಾಲ್ಮೀಕಿ ಸಮಾದ ಮಕ್ಕಳಿಗೆ ಶಿಕ್ಷಣದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ, ಉಚಿತ ಶಿಕ್ಷಣ ದೊರಕಿಸಿಕೊಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.ಪರಿಶಿಷ್ಟ ವರ್ಗಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ.
ಡಾ. ಜಿ. ರಂಗಯ್ಯ ಅವರು ನರರೋಗ ತಜ್ಞರಾಗಿದ್ದಾರೆ. ಅವರು ವಿದೇಶದಲ್ಲಿ ನ್ಯೂಯಾರ್ಕ್ ಸಿಟಿ ಮೆಡಿಕಲ್ ಸೊಸೈಟಿ ಅಧ್ಯಕ್ಷರಾಗಿ, ಅಮೇರಿಕ ದೇಶದಲ್ಲಿರುವ ಇಂಡಿಯನ್ ನ್ಯೂರಾಲಜಿಸ್ಟ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಇಂಡಿಯನ್ ನ್ಯೂರಾಲಜಿಸ್ಟ್ ನ್ಯಾಷನಲ್ ಅಸೋಸಿಯೇಷನ್ ಅಧ್ಯಕ್ಷರಾಗಿ, ನ್ಯೂಯಾಕರ್್ನ ಪ್ರತಿಷ್ಠಿತ ಸ್ಥಳಗಳಲ್ಲಿ ಸ್ಥಾಪಿಸಿರುವ ಮಹಾತ್ಮ ಗಾಂಧಿ ಪ್ರತಿಮೆಯ ಸ್ಥಾಪಕ ಸಮಿತಿ ಸದಸ್ಯರಾಗಿದ್ದಾರೆ. ರಾಷ್ಟದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಡಿಸಿಎಂ ಅವರ ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ ಉಪಸ್ಥಿತರಿದ್ದರು.