ನೋವುಗಳನ್ನು ಮರೆಸಿ ಹೃದಯ ಅರಳಿಸುವ ಚಿಕಿತ್ಸಕ ಗುಣ ಕಾವ್ಯಕ್ಕಿದೆ
ಲೋಕದರ್ಶನ ವರದಿ
ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಡಾ. ಮಲ್ಲಿಕಾರ್ಜುನ ಛಬ್ಬಿ ಅಭಿಮತ
ಮುನವಳ್ಳಿ 17: ಎಲ್ಲ ನೋವುಗಳನ್ನು ಮರೆಸಿ ಹೃದಯವನ್ನು ಅರಳಿಸುವ ಚಿಕಿತ್ಸಕ ಗುಣ ಕವಿತೆಗಿದೆ. ಹಾಗೆಂದೆ ಈ ಹೊತ್ತು ಪಂಚಲಿಂಗೇಶ್ವರನ ಸನ್ನಿಧಾನದಲ್ಲಿ ಕಾವ್ಯದ ಆರಾಧನೆ ನಡೆದಿದೆ ಎಂದು ಡಾ. ಮಲ್ಲಿಕಾರ್ಜುನ ಛಬ್ಬಿ ಹೇಳಿದರು. ಅವರು ಕನ್ನಡ ರಾಜ್ಯೋತ್ಸವದ ನಿಮಿತ್ಯ ಸಹೃದಯ ಸಾಹಿತ್ಯ ಪ್ರತಿಷ್ಠಾನ ನಗರದ ಡಿ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಬರಹಗಾರನ ಬರವಣಿಗೆ ಕಾವ್ಯದಿಂದಲೇ ಪ್ರಾರಂಭವಾಗುತ್ತದೆ. ದಟ್ಟ ಅನುಭವಗಳ ಅನಾವರಣವೇ ಕಾವ್ಯ. ಪ್ರಸ್ತುತ ವಸ್ತುಸ್ಥಿತಿಗೆ ಕಾವ್ಯ ಪ್ರತಿಸ್ಪಂದಿಸುವುದಲ್ಲದೆ ಜನರ ನೋವಿಗೆ ಮದ್ದಾಗಬೇಕು. ಕವಿಯಾದವನು ಯಾವುದೇ ಪ್ರಶಸ್ತಿಯ ಗೀಳಿಗೆ ಸಿಲುಕದೆ ಸೃಜನಶೀಲ ಬರವಣಿಗೆಗೆ ಗಮನ ಕೊಡಬೇಕು. ಇತ್ತೀಚೆಗೆ ಕೃತಿಚೌರ್ಯದಂತ ಕೃತ್ಯಗಳು ಹೆಚ್ಚಾಗುತ್ತಿವೆ. ಕದ್ದು ಬರೆದು ಹೆಸರು ಗಳಿಸುವ ಹಪಹಪಿ ಬೇಡ ಎಂದು ಅವರು ತಮ್ಮ ಆಶಯ ನುಡಿಗಳಲ್ಲಿ ಯುವಕವಿಗಳಿಗೆ ಕಿವಿಮಾತು ಹೇಳಿದರು. ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ರತ್ನಾ ಕದಂ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕವಿಗಳನ್ನು ಹತ್ತಿರದಿಂದ ಕಾಣುವ ಅವರ ಕವಿತೆಗಳನ್ನು ಕೇಳುವ ಅವಕಾಶ ಸಿಕ್ಕಿದೆ. ನಾಡುನುಡಿಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ನುಡಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಮಹಾಂತಪ್ಪ ನಂದೂರ ಮಾತನಾಡಿ, ನಾಡಹಬ್ಬದ ಸಂದರ್ಭದಲ್ಲಿ ನಡೆಯುತ್ತಿರುವ ಕನ್ನಡ ಮತ್ತು ಕಾವ್ಯದ ಆಚರಣೆಯ ಕವಿಗೋಷ್ಠಿಗೆ ವಿಶೇಷತೆಯಿದೆ. ಬುದ್ಧಿ ಪ್ರಧಾನ ಬದುಕಿಗಿಂತ ಭಾವ ಪ್ರಧಾನ ಬದುಕನ್ನು ನಮ್ಮದಾಗಿಸಿಕೊಂಡು ಕಾವ್ಯದ ಎತ್ತರಕ್ಕೆ ಹೋಗುವ ಪ್ರಯತ್ನವನ್ನು ಕವಿಗಳು ಮಾಡಬೇಕಿದೆ. ಕವಿತೆ ಬರೆಯುವುದು ಮುಖ್ಯವಲ್ಲ ಬರೆದಂತೆ ಬದುಕುವುದು ಮುಖ್ಯ. ಕಾವ್ಯವೆಂಬುದು ಹೃದಯದ ಭಾಷೆ, ಆತ್ಮ ಶೋಧನೆ, ಅನುಭವದ ಮೂಲಕ ಜನರ ಎದೆಗಳಿಗೆ ತಲುಪಿಸುವ ಮಹತ್ತರ ಕಾರ್ಯವನ್ನು ಎಲ್ಲ ಕವಿಗಳೂ ಮಾಡಲಿ ಎಂದರು. ಕಾವ್ಯಸ್ಪರ್ಧೆಯಲ್ಲಿ ದಾವಣಗೆರೆಯ ಮನು ಗುರುಸ್ವಾಮಿ ಪ್ರಥಮ, ರಾಣೆಬೆನ್ನೂರಿನ ಎಸ್. ಡಿ. ದೊಡ್ಡಚಿಕ್ಕಣ್ಣನವರ ದ್ವಿತೀಯ, ಉತ್ತರ ಕನ್ನಡ ಜಿಲ್ಲೆಯ ಪೂನಂ ಧಾರವಾಡಕರ ತೃತೀಯ ಸ್ಥಾನ ಗಳಿಸಿದರು. ಇವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 28 ಕವಿಗಳು ಕಾವ್ಯ ವಾಚನ ಮಾಡಿದರು.
ಕಾರ್ಯಪಾಲಕ ಅಭಿಯಂತರ ವಿಠಲ ತಡಸಲೂರ ಕವಿಗೋಷ್ಠಿಯ ಉದ್ಘಾಟನೆ ಮಾಡಿದರು. ಪ್ರತಿಷ್ಠಾನದ ಕಾರ್ಯ ಚಟುವಟಿಕೆ ಬಗ್ಗೆ ಪ್ರಾಸ್ತಾವಿಕವಾಗಿ ಅಧ್ಯಕ್ಷ ನಾಗೇಶ್ ಜೆ. ನಾಯಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಕುಮಾರಿ ಸಾನ್ವಿ ಎಸ್. ತುರಮಂದಿ ಭರತನಾಟ್ಯ ಪ್ರದರ್ಶಿಸಿದರು. ಎಸ್. ಜಿ. ತುರಮಂದಿ, ಎ. ಎಸ್. ಮಕಾನದಾರ, ಪತ್ರಕರ್ತ ಮುರಂಕರ, ನಿಲಯ ಪಾಲಕ ಹಾಶೀಮ್ ತಹಶೀಲದಾರ, ವಿಠ್ಠಲ ಕಂಬಾರ, ಮಲ್ಲಿಕಾರ್ಜುನ ಬೀಳಗಿ, ಬಿ.ಪಿ. ಪಟ್ಟಣಶೆಟ್ಟಿ, ಎಸ್. ಬಿ. ಮದ್ದಾನಿ ಉಪಸ್ಥಿತರಿದ್ದರು. ಎಸ್. ಬಿ. ಗರಗದ ಸ್ವಾಗತಿಸಿದರು, ರಮೇಶ್ ತಳವಾರ ವಂದಿಸಿದರು, ಬಿ. ವಿ. ಪತ್ತಾರ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 