ಜಾಗತಿಕ ಲಿಂಗಾಯತ ಮಹಾಸಭಾದ ಮಾಸಿಕ ಸತ್ಸಂಗ ಕಾರ್ಯಕ್ರಮದಲ್ಲಿ ಡಾ.ಮಹಾಂತಪ್ರಭು ಸ್ವಾಮೀಜಿ ಅಭಿಮತ

ಜಾಗತಿಕ ಲಿಂಗಾಯತ ಮಹಾಸಭಾದ ಮಾಸಿಕ ಸತ್ಸಂಗ ಕಾರ್ಯಕ್ರಮದಲ್ಲಿ ಡಾ.ಮಹಾಂತಪ್ರಭು ಸ್ವಾಮೀಜಿ ಅಭಿಮತ Dr. Mahantaprabhu Swamiji's speech at the monthly satsang program of the Global Lingayat Mahasabha

  ಹಾರೂಗೇರಿ 14 : ಧಾರ್ಮಿಕ, ಆಧ್ಯಾತ್ಮಿಕ ಶರಣರ ಪುಣ್ಯಭೂಮಿಯಲ್ಲಿ ಇನ್ನೂ ಹೆಣ್ಣಿನ ಮೇಲಿನ ದೌಜ್ಯನ್ಯಗಳು ನಿಂತಿಲ್ಲ. ತಾಯಂದಿರ ಸಂಸ್ಕಾರದಿಂದಲೇ ಮನುಕುಲದ ಉದ್ಧಾರವಾಗುತ್ತಿದೆ ಎಂಬುದನ್ನು ಮರೆಯಬಾರದು ಎಂದು ಶೇಗುಣಸಿ ವಿರಕ್ತ ಮಠದ ಪೂಜ್ಯಶ್ರೀ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು. 

  ಪಟ್ಟಣದ ಜನತಾ ಸಹಕಾರ ಬ್ಯಾಂಕಿನ ಸಭಾಭವನದಲ್ಲಿ ರವಿವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮಾಸಿಕ ಸತ್ಸಂಗ ಕಾರ್ಯಕ್ರಮ ಹಾಗೂ ಲಿಂ.ಮಲ್ಲವ್ವ ರಾಮಪ್ಪ ಗುಡಸಿ ಅವರ ದ್ವಿತೀಯ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಲಿಂಗಾಯತ ಧರ್ಮದ ಆಚರಣೆಗಳ ಕುರಿತು ಅವರು ಆಶೀರ್ವಚನ ನೀಡಿದರು. 

  ಹೃದಯವಂತಿಕೆ, ಪ್ರೀತಿಯಿಂದ ಜಗತ್ತನ್ನು ಗೆಲ್ಲಬೇಕು. ಶರಣರ ನಾಡು ಸುಸಂಸ್ಕೃತವಾಗಿರಲು ತಾಯಿಯ ಪಾತ್ರ ಮಹತ್ವದ್ದಾಗಿದ್ದು, ಆ ಪ್ರೀತಿ ಸಂಸ್ಕಾರದ ತಳಹದಿಯ ಮೇಲೆಯೇ ಜಗತ್ತು ಮುನ್ನಡೆಯುತ್ತಿದೆ. ತಾಯಂದಿರ ತ್ಯಾಗದಿಂದ ಭರತ ಭೂಮಿಯಲ್ಲಿ ನೆಮ್ಮದಿ, ಮಾನವೀಯ ಮೌಲ್ಯಗಳು ಜೀವಂತವಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರದೀಪ ಘಂಟಿ ಮಹಾರಾಜರು ಆಶೀರ್ವಚನ ನೀಡುತ್ತ ಭೂಮಿಗಿಂತ ತೂಕದ ವ್ಯಕ್ತಿತ್ವ, ಪರಿಶುದ್ಧ ಆತ್ಮ ತಾಯಿಯಲ್ಲಿದೆ. ತಾಯಿಯನ್ನು ಪೂಜಿಸುವ ನಾಡು ನಮ್ಮದು ಎಂದರು. 

  ಶರಣ ವಿಚಾರ ವಾಹಿನಿ ಅಧ್ಯಕ್ಷ ಆಯ್‌.ಆರ್‌.ಮಠಪತಿ ಅನುಭಾವ ನೀಡುತ್ತ ಬಯಲಲ್ಲಿ ಬಯಲಾಗುವ ಶರೀರಕ್ಕೆ ಪುಣ್ಯದ ಲೇಪನ ಮಾಡಬೇಕು. ವೃದ್ಧಾಶ್ರಮಗಳು ತಲೆಯೆತ್ತದಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು. ವಿಶ್ರಾಂತ ಉಪನ್ಯಾಸಕ ಆರ್‌.ಟಿ.ಮಾಳಿ ಹಾಗೂ ಡಿ.ಎಸ್‌.ಡಿಗ್ರಜ್ ಮಾತನಾಡಿದರು. ಈ ವೇಳೆ ಲಿಂಗಾಯತ ಮಹಾಸಭಾ ವತಿಯಿಂದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎಸ್‌.ಡಿಗ್ರಜ್, ವಿಶ್ರಾಂತ ಉಪನ್ಯಾಸಕ ಆರ್‌.ಟಿ.ಮಾಳಿ ಅವರನ್ನು ಸತ್ಕರಿಸಲಾಯಿತು. 

    ಜಾಗತಿಕ ಲಿಂಗಾಯತ ಮಹಿಳಾ ಘಟಕ ಅಧ್ಯಕ್ಷೆ ಅವ್ವಕ್ಕ ಜೊಲ್ಲೆ, ಕಾರ್ಯದರ್ಶಿ ಬಸವರಾಜ ಮಂಟೂರೆ, ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಅನುಸೂಯಾ ಮುಳವಾಡ, ಮಾಜಿ ಶಾಸಕ ಡಾ.ಬಿ.ಸಿ.ಸರಿಕರ, ಗೀರೀಶ ದರೂರ, ಶಿವಪುತ್ರ ಅಮರಶೆಟ್ಟಿ, ಎಸ್‌.ಎಲ್‌.ಬಾಡಗಿ, ಬಿ.ಎ.ಜಂಬಗಿ, ಮಹೇಶ ಮುಂಗುರವಾಡಿ, ರವೀಂದ್ರ ಪಾಟೀಲ, ತಮ್ಮಣ್ಣಪ್ಪ ತೇಲಿ, ಶೋಭಾ ಪಾಟೀಲ, ಅಮೃತಾ ಮುಂಗುರವಾಡಿ, ಶೈಲಾ ಮಾಳಿ, ಸುಜಾತಾ ಉಮರೆ, ಜ್ಯೋತಿ ಸುಳ್ಳದ, ಗೀತಾ ಮಾಳಶೆಟ್ಟಿ, ಚಂಪಕ್ಕ ಶಿರಹಟ್ಟಿ, ಸಾವಿತ್ರಿ ಕಡಬಗೇರಿ, ರಾಜಶ್ರೀ ಪಾಟೀಲ, ಭಾರತಿ ಪಾಟೀಲ, ಕುಮಾರ ಸತ್ತಿಗೌಡರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.