ನವರಸಪುರದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ. ಪಂಡಿತಾರಾಧ್ಯ ಶಿವಾಚಾರ್ಯರಿಂದ ಆಶೀರ್ವಚನ

ನವರಸಪುರದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ. ಪಂಡಿತಾರಾಧ್ಯ ಶಿವಾಚಾರ್ಯರಿಂದ ಆಶೀರ್ವಚನ  Dr. Channasiddharama, Srisailam Jagadguru of Navarasapura. Blessings from Panditaradhya Shivacharya

ವಿಜಯಪುರ 11 :  ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸಿ, ಸುಖ-ಶಾಂತಿ ಮತ್ತು ನೆಮ್ಮದಿಯುಕ್ತ ಬದುಕು ನಡೆಸಬೇಕು. ನಮ್ಮಲ್ಲಿ ಸಮಷ್ಠಿ ಪ್ರಜ್ಞೆ ಇರಬೇಕು. ನಾವು ಸತ್ಪಾತ್ರ ಮತ್ತು ಸತ್ಕಾರಕ್ಕಾಗಿ ದೇಣಿಗೆ ಅಥವಾ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು. ದೇವರು ನಮಗೆ ನೀಡುವ ಆದಾಯದಲ್ಲಿ ತನು-ಮನ-ಧನದಿಂದ ಧರ್ಮಕ್ಕಾಗಿ ಮೀಸಲಾಗಿಡಬೇಕು. ಮೇಲು-ಕೀಳುಗಳೆಂಬ ಅನಿಷ್ಠವನ್ನು ಹೋಗಲಾಡಿಸಿ, ಎಲ್ಲರೂ ಒಂದೇ ಮತ್ತು ವಸುದೈವ ಕುಟುಂಬಕಂ ಎನ್ನುವ ಸಹಿಂಷ್ಣುತೆಯ ಗುಣವನ್ನು ಬೆಳೆಸಿಕೊಂಡು ರಾಷ್ಟ್ರವು ಸರ್ವ ಜನಾಂಗದ ಶಾಂತಿಯ ತೋಟವಾಗುವಂತೆ ಬದುಕಬೇಕು. ಸತ್ಯದ ಅರಿವಿನೊಂದಿಗೆ ಬದುಕು ಸಾಗಿಸುವ ಮನಸ್ಸು ನಮ್ಮದಾಗಬೇಕು ಎಂದು  ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಅವರು ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ನವರಸಪುರದ ಸಿದ್ಧಾರ್ಥ ನಗರದಲ್ಲಿ ಜರುಗಿದ ಶ್ರೀಶೈಲ ಜಗದ್ಗುರುಗಳ ಆಶೀರ್ವಚನ ನೀಡಿ, ಮಾತನಾಡುತ್ತಿದ್ದರು.

ಅವರು ಮಾತನಾಡುತ್ತಾ, ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಬೇಕು. ಜೀವನದಲ್ಲಿ ಪ್ರೀತಿ, ಶಾಂತಿ, ನೆಮ್ಮದಿ, ಸಮಾನತೆ, ಸಾಮರಸ್ಯತೆ, ಸಂಸ್ಕೃತಿ-ಸಂಸ್ಕಾರ, ಸದ್ಗುಣಗಳು ಒಡಮೂಡಬೇಕು. ಧಾರ್ಮಿಕ ಮತ್ತು ಅಧ್ಯಾತ್ಮಿಕತೆಯ ಕಾರ್ಯದಲ್ಲಿ ತೊಡಗಬೇಕು. ಕೋವಿಡ್ ನಂತಹ ಕಾಲಘಟ್ಟದಲ್ಲಿ ಸಾವು-ನೋವುಗಳಿಂದ ಕಂಡ ಮನುಜ ಹಣ, ಆಸ್ತಿ ಮತ್ತು ಸಂಪತ್ತು ಎಷ್ಟೇ ಗಳಿಕೆ ಮಾಡಿದರೂ ಜೀವನದಲ್ಲಿ ಏನು ಇಲ್ಲವೆಂಬುದನ್ನು ಮನಗಂಡು ದೇವರು, ಧಾರ್ಮಿಕತೆ ಮತ್ತು ಅಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿರುವದು ಉತ್ತಮ ಬೆಳವಣಿಗೆಯಾಗಿದ. ಮನುಷ್ಯನಿಗೆ ಅಂತರಂಗದ ಆಭರಣಗಳಾದ ಸತ್ಯ, ಪ್ರಾಮಾಣಿಕತೆ, ನ್ಯಾಯ-ನೀತಿ, ಒಳ್ಳೆಯ ಸುಳ್ನುಡಿ ಶ್ರವಣ, ಧರ್ಮ-ನೀತಿಯೊಂದಿಗೆ ಜೀವನ ನಡೆಸುತ್ತಾ, ಸದಾ ಸದಾಚಾರ, ಸನ್ನಡತೆ, ಸದ್ಭಾವ, ಸಚ್ಚಾರಿತ್ರ್ಯ, ಸಮತಾಭಾವದಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು.

ಅಲೆಕ್ಸಾಂಡರ್ ಇಡೀ ಜಗತ್ತನ್ನೇ ಗೆದ್ದರೂ ಕೊನೆಯ ಪಯಣದಲ್ಲಿ ತನ್ನ ಎರಡು ಖಾಲಿ ಕೈಗಳು ಜನರಿಗೆ ಕಾಣವಂತೆ ಅಂದರೆ ಬರುವಾಗ ಏನು ತಂದಿಲ್ಲ, ಹೋಗುವಾಗ ಯಾವುದನ್ನೂ ತಗೊಂಡು ಹೋಗಲ್ಲ ಎಂಬ ಜೀವನದ ಪರಮ ಸತ್ಯ ಜನರಿಗೆ  ಅರ್ಥವಾಗಬೇಕು ಎಂಬ ಸಂದೇಶ ಅರಿಯಬೇಕು ಎಂದರು.  ಈ ಕಾರ್ಯಕ್ರಮದಲ್ಲಿ ಶಿವನಗೌಡ ಪಾಟೀಲ ದಂಪತಿಗಳು ಜಗದ್ಗುರುಗಳಿಗೆ ಪಾದಪೂಜೆ ಮಾಡಿ ಧನ್ಯತಾ ಭಾವ ಹೊಂದಿದರು.  ಕಾರ್ಯಕ್ರಮದಲ್ಲಿ ಲ್‌-ಅಮೀನ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಬಿ.ಎಸ್‌.ಪಾಟೀಲ, ಪ್ರೊ. ಎಂ.ಎಸ್‌.ಖೊದ್ನಾಪೂರ, ಶಿವಾಲಯ ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಭರಮಣ್ಣ ಕಡಕೋಳ, ಸಾಬು ಅಗ್ರಾಣಿ, ಸನೀಲ ಫತ್ತೇಪೂರ, ಅಲ್ಲಮಪ್ರಭು ಶಿರಹಟ್ಟಿ, ರಾಜಶೇಖರ ಉಮರಾಣಿ, ಸುರೇಶ ಹಲಕುಡೆ, ಲಕ್ಷ್ಮೀ ದೇವಸ್ಥಾನದ ಅಧ್ಯಕ್ಷೆ ಶೋಭಾ ಚವ್ಹಾಣ ಇನ್ನಿತರರು ಸಹ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನವರಸಪುರದ ವಿವಿಧ ಬಡಾವಣೆಗಳ ನೂರಾರು ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಭಾಗವಹಿಸಿದರು.