ಡಾ. ಬಿ. ಆರ್‌. ಅಂಬೇಡ್ಕರ್ ಜಯಂತಿ ಆಚರಣೆ

ಡಾ. ಬಿ. ಆರ್‌. ಅಂಬೇಡ್ಕರ್ ಜಯಂತಿ ಆಚರಣೆ  Dr. B. R. Ambedkar Jayanti Celebration: Talikoti News

ತಾಳಿಕೋಟಿ 14: ಪಟ್ಟಣದ ಎಸ್ ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ.ಬಿ. ಆರ್‌.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು  

"ಮನೆ ಮನೆಗೆ ಮನ ಮನಕೆ ಡಾ. ಬಾಬಾ ಸಾಹೇಬರು ಎಂಬ ಅರ್ಥಪೂರ್ಣ ಅಭಿಯಾನದಡಿ, ಅತ್ಯಂತ ಸಡಗರ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು.  

ಮಹಾವಿದ್ಯಾಲಯದ ಉಪನ್ಯಾಸಕ ಸುರೇಶ ಬಡಿಗೇರ ಅವರು ಬಾಬಾ ಸಾಹೇಬರ ಜೀವನ ಮತ್ತು ಸಂದೇಶಗಳ ಕುರಿತು ಮಾರ್ಮಿಕವಾಗಿ ಮಾತನಾಡಿದರು.  

ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಜಾತಿ ಮತ್ತು ಲಿಂಗ ತಾರತಮ್ಯದಂತಹ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಅಂಬೇಡ್ಕರ್ ಅವರು ನಮಗೆ ’ಸಂವಿಧಾನ’ ಎಂಬ ಅಪ್ರತಿಮ ಆಯುಧವನ್ನು ನೀಡಿದ್ದಾರೆ. ಕೇವಲ ಕಾನೂನು ರೂಪಿಸುವುದಷ್ಟೇ ಅಲ್ಲದೆ, ಮೂಢನಂಬಿಕೆ ಮತ್ತು ಮೌಢ್ಯತೆಯಿಂದ ಜನರನ್ನು ಮುಕ್ತಗೊಳಿಸಿ, ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಘನತೆ ಹಾಗೂ ಗೌರವದ ಬದುಕು ಕಟ್ಟಿಕೊಡುವುದು ಅವರ ಆಶಯವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ಸಿಗಬೇಕೆಂಬ ಅವರ ಹೋರಾಟ ಇಂದಿಗೂ ನಮಗೆಲ್ಲರಿಗೂ ದಾರೀದೀಪವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಅಂಬೇಡ್ಕರ್ ಅವರ ಕ್ರಾಂತಿಕಾರಿ ಚಿಂತನೆಗಳು, ಶಿಕ್ಷಣಕ್ಕೆ ಅವರು ನೀಡಿದ ಒತ್ತು ಮತ್ತು ಅವರ ಜೀವನದ ಮಹತ್ತರ ಸಾಧನೆಗಳನ್ನು ಸ್ಮರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಹಾಜರಿದ್ದು, ಸಂವಿಧಾನ ಶಿಲ್ಪಿಯ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು.