ಭಾರತೀಯ ರಂಗಭೂಮಿ ಕ್ಷೇತ್ರದಲ್ಲಿ ಕರ್ನಾಟಕ ರಂಗಭೂಮಿಯ ಪಾತ್ರ ಹಿರಿದಾಗಿದ್ದು, ಇಲ್ಲಿ ಅನೇಕ ದಿಗ್ಗಜರು ಆಗಿ ಹೋಗಿದ್ದಾರೆ. ರಂಗಭೂಮಿಯು ಸದಾ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಾ ತನ್ನ ಸೃಜನಶೀಲ ಪ್ರಯೋಗಗಳ ಮೂಲಕ ವರ್ತಮಾನದ ಸಮಾಜಕ್ಕೆ ಸಾಮಾಜಿಕ ಮೌಲ್ಯಗಳನ್ನು ಪುನರುಚ್ಛರಿಸುತ್ತ ಜಾಗೃತ ಸಮಾಜಕ್ಕೆ ಕಾರಣವಾಗಿದೆ.
ಕನ್ನಡ ಹವ್ಯಾಸಿ ರಂಗಭೂಮಿ ಜನ್ಮ ತಾಳಿದ್ದು ಹತ್ತೊಂಬತ್ತನೇ ಶತಮಾನದಲ್ಲಿ ಮೊಟ್ಟಮೊದಲನೆ ಹವ್ಯಾಸಿ ನಾಟಕ ತಂಡ “ಪ್ರಾಚ್ಯ ಕ್ರೀಡಾ ಸಂವರ್ಧನ ಮಂಡಳಿ” 1899ರಲ್ಲಿ ಧಾರವಾಡದ ಸಮೀಪ ಮದಿಹಾಳದಲ್ಲಿ ಗಣಪತಿ ಉತ್ಸವದಲ್ಲಿ ಪೌರಾಣಿಕ ನಾಟಕಗಳನ್ನು ಅಭಿನಯಿಸುವ ಮೂಲಕ ಕನ್ನಡ ಹವ್ಯಾಸಿ ರಂಗಭೂಮಿಯ ಚರಿತ್ರೆಗೆ ನಾಂದಿಹಾಡಿತು. 1905ರಲ್ಲಿ ಮುದವಿಡು ಕೃಷ್ಣರಾಯರ ನೇತ್ರತ್ವದಲ್ಲಿ “ಭಾರತ ಕಲಾತ್ತೇಜಕ ಸಂಗೀತ ಸಮಾಜ” ತಲೆ ಎತ್ತಿ ಹವ್ಯಾಸಿ ರಂಗಭೂಮಿ ಹೊಸಹುರುಪನ್ನು ಪಡೆದುಕೊಂಡಿತು. ಹವ್ಯಾಸಿ ರಂಗಭೂಮಿಗೆ ನವಚೈತನ್ಯ ಬಂದದ್ದು ಇಪ್ಪತ್ತನೇಯ ಶತಮಾನದ ದ್ವಿತಿಯಾರ್ಧದಲ್ಲಿ.
ಇಲ್ಲಿ ನಾನು ಹೇಳಹೊರಟಿರುವುದು ಬಹುಮುಖ ವ್ಯಕ್ತಿತ್ವದ ಹವ್ಯಾಸಿ ರಂಗಭೂಮಿಯ ಡಾ.ಅರವಿಂದ ಕುಲಕರ್ಣಿ ಕುರಿತು, ರಂಗಸಂಪದದ ಅರವಿಂದರು ಎಂದರೆ ಯಾರಿಗೆತಾನೆ ಗೊತ್ತಿಲ್ಲ? ಸದಾ ಚಟುವಟಿಕೆಯಿಂದ ಇರುವ ವ್ಯಕ್ತಿ ನಟರಾಗಿ, ನಿರ್ದೇಶಕರಾಗಿ, ಕನ್ನಡ ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಮುಖ್ಯ ಕೊಂಡಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಅರವಿಂದರು 1955ರಲ್ಲಿ ಆಗಷ್ಟ 8 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ಹುಣಸಿಕಟ್ಟಿಯಲ್ಲಿ ಪ್ರತಿಭಾವಂತ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಲಕ್ಷ್ಮಣರಾವ್ ಮತ್ತು ಉಷಾ ದಂಪತಿಗಳ ನಾಲ್ಕನೆಯ ಮಗನಾಗಿ ಜನಿಸಿದರು. ತಂದೆ ಆರ್.ಎಂ.ಎಸ್. ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಅಂತಹ ಅನಕೂಲಸ್ತರೇನು ಆಗಿರಲಿಲ್ಲವೆಂದೆ ಹೇಳಬೇಕು. ಅರವಿಂದರು ಕೇವಲ 4ವರ್ಷ ಇರುವಾಗಲೇ ತಂದೆಯನ್ನು ಕಳೆದುಕೊಂಡರು.
ತುತ್ತಿನ ಚೀಲಕ್ಕೆ ಆಧಾರವಾಗಿದ್ದ ತಂದೆ ತೀರಿಕೊಂಡ ನಂತರ ಅವರ ಕುಟುಂಬ ದಿಕ್ಕುತೋರದಂತಾಗಿ ಕಡುಬಡತನ ಕಾಡತೊಡಗಿತು. ದಿನಗಳು ಕಳೆದಂತೆ 4 ಚಿಕ್ಕ ಮಕ್ಕಳನ್ನು ಸಾಕುವುದು ಅರವಿಂದರ ತಾಯಿಗೆ ಕಷ್ಟವಾಗತೊಡಗಿತು. ಹೀಗಾಗಿ ನಾಲ್ಕು ಮಕ್ಕಳನ್ನು ಒಂದೊಂದು ಕಡೆ ಒಬ್ಬೊಬ್ಬರನ್ನು ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿದರು. ತಾಯಿ ಉಷಾ ತುಂಬ ಜಾಣೆ ಧೈರ್ಯವಂತೆ ತುಂಬು ಸೌಂಸಾರದ ಜೀವನೋಪಾಯಕ್ಕೆ ನರ್ಸಿಂಗ್ ಕೋರ್ಸಗೆ ಸೇರಿಕೊಳ್ಳುತ್ತಾರೆ. ಉತ್ತಮ ಅಂಕದೊಂದಿಗೆ ಪಾಸಾಗಿ, ಗ್ರಾಮಾಂತರ ಪ್ರದೇಶದ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ತಾಯ ಉಷಾ ಅವರಿಗೆ ವರ್ಷಕ್ಕೊಮ್ಮ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ವರ್ಗಾವಾಗುತ್ತಿತ್ತು. ಹೀಗಾಗಿ ಒಂದೇ ಕಡೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಕಾರಣ ಬೇರೆ ಬೇರೆ ಊರುಗಳಲ್ಲಿ ಕಲಿತರು
ತಾಯಿ ಉಷೆ ಜನರ ಆರೋಗ್ಯ ಸೇವೆಗೆ ದೂರದ ಹಳ್ಳಿಗಳಿಗೆ ನಡೆದುಕೊಂಡು ಹೋಗುತ್ತಿದ್ದರು. ಸಮಯಕ್ಕೆ ಸರಿಯಾಗಿ ಊಟ,ತಿಂಡಿ ಮಾಡುತ್ತಿರಲಿಲ್ಲ. ತಾಯಿಯ ಜೊತೆಯಲ್ಲಿದ್ದ ಅರವಿಂದರು ತಾಯಿ ಪಡುವ ಕಷ್ಟಗಳನ್ನು ಹತ್ತಿರದಿಂದ ನೋಡುತ್ತಿದ್ದರು.
ತಾಯಿ ನಡೆದುಕೊಂಡು ಹೋಗುವುದನ್ನು ನೋಡಿ ಅವ್ವಾ ನಾನು ದೊಡ್ಡವನಾದಮೇಲೆ ಒಂದು ಕಾರು ತೊಗೋತೀನಿ. ಅದರೊಳಗ ನಿನ್ನ ಕೂಡಿಸಿಕೊಂಡು ಹೋಗ್ತೇನಿ ಅನ್ನುತ್ತಿದ್ದರಂತೆ.
ಕಷ್ಟಗಳನ್ನು ಅರಿತಿದ್ದ ನಾನು ಬಡವನಾಗಿ ಸಾಯಬಾರದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ನನಗೆ ಹಟ ಇತ್ತು ಎನ್ನುತ್ತಾರೆ.
ಜೀವನದ ಆಟದಲ್ಲಿ ಪರೀಕ್ಷೆಗಳೆ ಹೆಚ್ಚು ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಬೇಕು. ನಾವು ಪ್ರತಿಯೊಂದನ್ನು ನಮ್ಮ ಅನುಭವದಿಂದ ಕಲಿಯಬೇಕು ಜೀವ ಚಿಕ್ಕದು ಜೀವನ ಬಹು ದೊಡ್ಡದು. ನಮ್ಮ ಗುರಿ ತಲುಪಲು ನಿರಂತರ ಹೋರಾಟ ಹಾಗೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದೆನಿಸದೇ ಇರದು ಅಲ್ಲವೆ ?
ಒಪ್ಪತ್ತಿ ಊಟಕ್ಕೆ ಪರದಾಡಬೇಕಾದ ಪರಿಸ್ಥಿತಿಯಲ್ಲಿ ಬೆಳೆದುಬಂದ ಅರವಿಂದರು ಎಷ್ಟೋ ಸಲ ಊಟವು ಇಲ್ಲದೇ ಹಸಿವೆಯೊಂದ ಮಲಗಿಕೊಂಡ ದಿನಗಳನ್ನು ಮೆಲಕು ಹಾಕುವ ಅವರು 9ನೇ ಇಯತ್ತೆ ವರೆಗೆ ಕಾಲಲ್ಲಿ ಚಪ್ಪಲಿ ಇರಲಿಲ್ಲ. ಹಾಪ್ಯಾಂಟನಲ್ಲಿ ದ್ವಿತಿಯಿಯ ಪಿ.ಯು.ಸಿ ಮುಗಿಸಿರುವುದನ್ನ ನೆನಪಿಸಿಕೊಳ್ಳುತ್ತಾರೆ.
ಓದಿನಲ್ಲಿ ಮುಂದಿದ್ದ ಅರವಿಂದರು ಎಸ್.ಎಸ್.ಎಲ್.ಸಿಗೆ ಚಿಕ್ಕೊಡಿಯ ಎಕ್ಸಂಬಾದಲ್ಲಿರುವ ಕರ್ನಾಟಕ ಸ್ಕೂಲನಲ್ಲಿ ಪ್ರವೇಶ ಪಡೆದು, 1969ರಲ್ಲಿ ಎಸ್.ಎಸ್.ಎಲ್.ಸಿ ಫಸ್ಟ್ ಕ್ಲಾಸ್ ದಲ್ಲಿ ಉತ್ತೀರ್ಣರಾಗುತ್ತಾರೆ. ಈಗಲೂ ಆ ಶಾಲೆಯಲ್ಲಿ ಅವರ ಹೆಸರು ಧಾಖಲಾಗಿರುವುದನ್ನ ಕಾಣಬಹುದು.
ಶಾಲಾ ದಿನಗಳಿಂದಲೂ ರಂಗಭೂಮಿ, ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದ ಅರವಿಂದರು ಖಾನಾಪುರದಲ್ಲಿ 6ನೇ ಇಯತ್ತೆ ಕಲಿಯುವಾಗಲೇ ದ.ರಾ.ಬೇಂದ್ರೆ ಅವರ “ ಇಂದಿನ ಸಂಸಾರ” ನಾಟಕದಲ್ಲಿ ಅಭಿಯಿಸಿದ್ದು ಇದು ಅವರ ಮೊದಲನೆ ನಾಟಕವಾಗಿತ್ತು. ಕಾಲೇಜ ದಿನಗಳಲ್ಲಿ ಶ್ರೀರಂಗರ “ಕೂಟ ದಾರಿಯಲ್ಲ” ಈ ಹಾದಿ ಎಲ್ಲಿ ಹೋಗುತ್ತದೆ” ಮುಂತಾದ ನಾಟಕಗಳಲ್ಲಿ ತಮ್ಮ ಮನೋಜ್ಞ ಅಭಿನಯ ನೀಡಿದ್ದಾರೆ
ವಿಧ್ಯಾರ್ಥಿ ದಿನಗಳಿಂದಲೆ ಅಭಿನಯ, ನಾಟಕ ಎಂದು ಹಚ್ಚಿಕೊಂಡ ಗೀಳು ಶಾಲೆ, ಕಾಲೇಜಿನ ವಾರ್ಷಿಕೋತ್ಸವ ಇತ್ಯಾದಿ ಸಂದರ್ಭಗಳ ನಾಟಕಗಳಲ್ಲಿ ಪಾತ್ರ ಮಾಡಿ ನಾಟಕದ ಹುಚ್ಚು ಬೆಳೆಸಿಕೊಂಡಿದ್ದ ಅರವಿಂದ ಕುಲಕರ್ಣಿ ಅವರನ್ನು ಗಾಢವಾಗಿ ಪ್ರಭಾವಿಸಿದ್ದು ಹವ್ಯಾಸಿ ರಂಗಭೂಮಿ.
ಕರ್ನಾಟಕ ವಿಶ್ವವಿಧ್ಯಾಲಯದಿಂದ ಎಂ.ಎಸ್.ಸಿ ಸ್ನಾತಕೋತ್ತರ ಪದವಿ ಪಡೆದ ಅರವಿಂದರಿಗೆ, ತಾಯಿ ವೈಧ್ಯಕೀಯ ಕ್ಷೇತ್ರದಲ್ಲಿ ಇದ್ದುದರಿಂದ ವೈಧ್ಯನಾಗುವ ಆಶೆ ಇತ್ತು. ಬಡತನದಿಂದ ಹಣ ಕೂಡಿಸುವುದು ಸಾಧ್ಯವಾಗದ ಕಾರಣ ವೈಧ್ಯನಾಗುವ ಕನಸು ಕೈಗೂಡಲಿಲ್ಲ ಎನ್ನುವ ಅವರು 1980 ರಲ್ಲಿ ಸಸ್ಯಶಾಸ್ತ್ರದಲ್ಲಿ ಪಿ.ಎಚ್.ಡಿ ಡಾಕ್ಟರೇಟ ಪದವಿ ಪಡೆದಿದ್ದಾರೆ.
ಡಾಕ್ಟರೇಟ ಮಾಡುವಾಗಲೇ ಅದೇ ವಿಶ್ವವಿಧ್ಯಾಲಯದಲ್ಲಿ ತನಗಿಂತಲೂ ಒಂದು ವರ್ಷ ಜೂನಿಯರ್ ಆಗಿದ್ದ ಪದ್ಮಾ ಅವರೊಡನೆ ಪ್ರೇಮಾಂಕುರವಾಗುತ್ತದೆ. 1977ರಲ್ಲಿ ಅರವಿಂದ ಕುಲಕರ್ಣಿ ಹಾಗೂ ಪದ್ಮಾ ಸತಿಪತಿಗಳಾಗುತ್ತಾರೆ.
ಪದ್ಮಾ ಧಾರವಾಡದಲ್ಲಿ ಹುಟ್ಟಿ ಬೆಳೆದವರು ರಂಗಭೂಮಿ ಕಲಾವಿದೆ ಸಂಗೀತ, ನಾಟಕ, ಸಾಹಿತ್ಯದ ಹುಚ್ಚು, ಪುಸ್ತಕ ಪ್ರೇಮಿ, ಇಂಗ್ಲೀಷ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅರವಿಂದರು ಗ್ರಾಮೀಣ ಪ್ರದೇಶದಿಂದ ಬಂದವರು ಕನ್ನಡ ಭಾಷೆಯಲ್ಲಿ ಪ್ರಭುತ್ವವಿತ್ತು. ಇಂಗ್ಲೀಷ ಅಷ್ಟಕ್ಕಷ್ಟೆ. ಅರವಿಂದರ ಜೀವನದಲ್ಲಿ ಪತ್ನಿ ಪದ್ಮಾ ಅವರ ಪ್ರವೇಶದಿಂದ ಇಂಗ್ಲೀಷ ಭಾಷೆಯನ್ನು ಅರವಿಂದರು ಕರಗತಮಾಡಿಕೊಂಡರು. ಇಬ್ಬರಲ್ಲೂ ರಂಗಭೂಮಿಯ ಸೆಳೆತವಿತ್ತು. ಹೆಸರಾಂತ ನಿರ್ದೇಶಕ ಜಯತೀರ್ಥ ಜೋಶಿ ಅವರ ನಿರ್ದೇಶನದಲ್ಲಿ “ತಾಮ್ರ ಪತ್ರ” ನಾಟಕದಲ್ಲಿ ದಂಪತಿಗಳು ತಮ್ಮ ಅಭಿನಯ ಪ್ರತಿಭೆಯನ್ನು ಪ್ರದರ್ಶಿಸಿ ಒಳ್ಳೆಯ ನಟನೆಂಬ ಪ್ರಶಂಸೆಗೆ ಪಾತ್ರರಾದರು ಮುಂದೆ ಆಗಾಗ ಹವ್ಯಾಸಿ ನಾಟಕ ತಂಡಗಳಲ್ಲಿ ವಿಭಿನ್ನ ಬಗೆಯ ಪಾತ್ರಗಳಲ್ಲಿ ಅಭಿನಯಿಸಿದ್ದು ಇದೆ. ಈ ಮಧ್ಯ ಕರ್ನಾಟಕ ವಿಶ್ವವಿಧ್ಯಾಲಯದಲ್ಲಿ ಕಲಿಯುತ್ತಿದ್ದ ಜಯಂತ ಕಾಯ್ಕಿಣಿ, ಗುರುರಾಜ ಹೊಸ್ಕೋಟಿ ಅವರ ಸಾಂಗತ್ಯ ದೊರೆಯಿತು.
ಅರವಿಂದರು ಸದಾ ಶಿಸ್ತಿನ ಮನುಷ್ಯ ಅವರ ನಡೆ ನುಡಿ ಎಲ್ಲವೂ ಗಂಭೀರ ಸದಾ ನೀಟಾದ ಉಡುಪು ಮಾತನಾಡುವ ಕಲೆ ಕರಗತವಾಗಿತ್ತು. ಧಾರವಾಡದ ಕಿಟ್ಲ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಗೆ ಸೇವೆಗೆ ಸೇರಿಕೊಂಡರು.
ಒಬ್ಬ ವಿಜ್ಞಾನದ ಮೇಷ್ಟ್ರಾಗಿ ತಮ್ಮ ಪಾಠದ ಜೊತೆಗೆ ನಾಟಕ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ವಿಧ್ಯಾರ್ಥಿಗಳಲ್ಲಿ ಅಭಿರುಚಿಯನ್ನು ಮೂಡಿಸಿ, ವಿಧ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ರಂಗಭೂಮಿಯಲ್ಲಿ ತೊಡಗಿಸಿದ್ದಾರೆ.
ಓದುವ ಅಭ್ಯಾಸವು ಸಾಹಿತ್ಯ ಅಭಿರುಚಿ ಬೆಳೆಸುವ ಒಂದು ಭಾಗ. ಓದಿದ ಅನೇಕ ಮಕ್ಕಳಲ್ಲಿ ಬರೆಯುವ ಹವ್ಯಾಸವಿರುತ್ತದೆ. ಅದನ್ನು ಪೋಷಕರು ಶಿಕ್ಷಕರು ಗುರುತಿಸಬೇಕು ಮಕ್ಕಳಲ್ಲಿ ನಾನು ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಬೇಕು ಎನ್ನುವ ಅರವಿಂದರು, ಬಾಲ್ಯದಿಂದಲೂ ನಾಟಕ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಪ್ರಾಥಮಿಕ ಶಾಲಾ ದಿನಗಳಿಂದಲೇ ರಂಗಭೂಮಿಯ ಪ್ರವೇಶ ಮಾಡಿದ ಇವರು ಸಾಂಸ್ಕೃತಿಕ ಕ್ಷೇತ್ರದ ತವರೂರೆಂದೆ ಹೆಸರಾಗಿರುವ ಧಾರವಾಡದಲ್ಲಿ ಅನೇಕ ಹವ್ಯಾಸಿ ಕಲಾ ತಂಡಗಳೊಂದಿಗೆ ಕ್ರಯಾಶೀಲರಾಗಿದ್ದುಕೊಂಡು “ಕೇಳು ಜನಮೇಜಯ”, “ಯಯಾತಿ”, “ಏವಂಇಂದ್ರಜಿತ” ಮತ್ತು “ಮಂಟೆಸ್ವಾಮಿ ಕಥಾಪ್ರಸಂಗ” ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು.
ಚಿಕ್ಕಂದಿನಲ್ಲಿದ್ದ ಕಾರಿನ ಹುಚ್ಚು ಕೈಗೂಡಿರಲಿಲ್ಲ ಎಲ್.ಐ.ಸಿ ಯಲ್ಲಿ ಟಾರ್ಗೇಟ ಅಚೀವ್ ಮಾಡಿದರೆ ಕಾರು ಕೊಡುತ್ತಾರೆ ಎಂದು ಯಾರೋ ಹೇಳಿದರಂತೆ. ಹೀಗಾಗಿ 1982 ರಲ್ಲಿ ಭಾರತೀಯ ಜೀವ ವಿಮಾ ನಿಗಮ ಪರೀಕ್ಷೆಗೆ ಕುಳಿತು ಪಾಸಾಗಿ ಧಾರವಾಡ ಜೀವವಿಮಾ ನಿಗಮದಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ರಂಗಭೂಮಿ ನಾಟಕ ಎನ್ನುವದೇ ನಿರಂತರ ಕಲಿಯುವಿಕೆಯನ್ನು ಒತ್ತಾಯಿಸುವ ಒಂದು ಕಲಾ ಪ್ರಕಾರ. ಪ್ರತಿ ದಿನ ಹೊಸತನ್ನು ಕಲಿಯುವುದು ರಂಗಭೂಮಿಯ ಸಾಧ್ಯತೆಗೆ ಅನಿವಾರ್ಯವಾದದ್ದು. ನಾಟಕದ ಮುಖ್ಯ ಉದ್ದೇಶ ಮನರಂಜನೆಯಾದರೂ, ಈ ಮಾಧ್ಯಮ ಗಂಭೀರ ವಿಚಾರಗಳತ್ತ ಪ್ರೇಕ್ಷಕನ ಗಮನ ಸೆಳೆದು ಅವರನ್ನು ಚಿಂತನಾಶೀಲರನ್ನಾಗಿ ಮಾಡುವಲ್ಲಿ, ವ್ಯಕ್ತತ್ವ ವಿಕಸನದಲ್ಲಿ ಹಾಗೂ ಒಂದು ಸ್ವಸ್ಥ ಪರಿಸರ ಅಥವಾ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲೂ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ಅರವಿಂದರು 1975 ರಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದರೂ ನಾಟಕ ನಿರ್ದೇಶಕರು ಹೇಳುವದನ್ನಷ್ಟೆ ಒಪ್ಪಿಸುತ್ತಿದ್ದರು. ರಂಗಭೂಮಿಯಲ್ಲಿ ಹೆಚ್ಚಿನ ಕಲಿಕೆಯ ಹಂಬಲ ಅವರಲ್ಲಿತ್ತು. ಕಲಿಕೆ ಎನ್ನುವುದು ನಿರಂತರ,ಧಾರವಾಡದ ಅಭಿನಯ ಭಾರತಿ ಹವ್ಯಾಸಿ ಕಲಾ ಸಂಸ್ಥೆ 1991ರಲ್ಲಿ ಹಮ್ಮಿಕೊಂಡ 31 ದಿನಗಳ ಅಭಿನಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡರು. ಆಗತಾನೆ ನೀನಾಸಂ ನಲ್ಲಿ ಪದವಿ ಪಡೆದು ಬಂದಿದ್ದ ಶ್ರೀ.ಪ್ರಮೋದ ಶಿಗ್ಗಾವಿ ಸಂಪನ್ಮೂಲ ವ್ಯಕ್ತಿಯಾಗಿದ್ದರು ಎಂದು ಮೆಲಕು ಹಾಕುವ ಅರವಿಂದರು ಪ್ರಮೋದ ಶಿಗ್ಗಾವಿ ನನ್ನ ರಂಗಭೂಮಿಯ ಮೊದಲ ಗುರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪತಿ-ಪತ್ನಿ ಇಬ್ಬರೂ ಪ್ರಮೋದ ಶಿಗ್ಗಾವಿ ಅವರ ತರಬೇತಿ ಶಿಬಿರದಲ್ಲಿ ನಾಟಕ, ಥೇಟರ್, ಸ್ಕ್ರಿಪ್ಟ್, ಅಭಿನಯ, ನಿರ್ದೇಶನ, ಸ್ಟೇಜ ಕ್ರಾಫ್ಟ್, ಪ್ರಾಪರ್ಟಿ ಮಾಡುವುದನ್ನ ಕಲಿತು ಪ್ರಮೋದ ಶಿಗ್ಗಾವಿ ಅವರ ಗರಡಿಯಲ್ಲಿ ಪಳಗಿದ ಅರವಿಂದ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ಪ್ರಯೋಗಶೀಲತೆಯನ್ನು ಕಂಡುಕೊಂಡರು.ಅದರಂತೆ ತರಬೇತಿಯ ಕೊನೆಗೆ ಪ್ರಮೋದ ಅವರ ನಿರ್ದೇಶನದಲ್ಲಿ ರಶಿಯನ್ ನಾಟಕ ಕನ್ನಡಕ್ಕೆ ನಾರಾಯಣ ರೈಚೂರು ಅನುವಾದಿಸಿದ “ಈ ಕೆಳಗಿನವರು” ನಾಟಕ ಪ್ರದರ್ಶನವಾಯಿತು. ಈ ನಾಟಕದಲ್ಲಿ ಪತಿ-ಪತ್ನಿ ಇಬ್ಬರೂ ಅಭಿನಯಿಸಿದ್ದರು. ಮುಂದೆ ಪ್ರಮೋದ ಶಿಗ್ಗಾವಿ ಅವರ ನಿರ್ದೇಶನದಲ್ಲಿ ರಥಮುಸಲ, ಮಂಟೆಸ್ವಾಮಿ ಕಥಾ ಪ್ರಸಂಗ, ಯಯಾತಿ, ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು.
ತಮ್ಮ ಬೆಳವಣಿಗೆಯಲ್ಲಿ ಧಾರವಾಡ ಹಾಗೂ ಪತ್ನಿ ಪದ್ಮಾ ಅವರ ಪಾಲು ಬಹಳವಿದೆ ಎನ್ನುವ ಅರವಿಂದರು ಸಂಗೀತ, ನಾಟಕ, ಸಾಹಿತ್ಯ ಕ್ಷೇತ್ರಗಳಲ್ಲಿ ನನ್ನನ್ನು ಹೆಚ್ಚು ತೊಡಗಿಸಿಕೊಳ್ಳಲು ಕಾರಣವಾಯಿತು ಎನ್ನುತ್ತಾರೆ.
ತಮ್ಮ ಸಮಯಪಾಲನೆ ಶಿಸ್ತು ಪ್ರಾಮಾಣಿಕತೆ ಮತ್ತು ನಿಷ್ಠೆ ಸಮಯಪ್ರಜ್ಞೆ ಹೊಂದಿದ್ದ ಅರವಿಂದರಿಗೆ ಬಹು ಬೇಗನೆ ಪದೋನ್ನತಿಗಳು ಕೂಡಿ ಬರುತ್ತವೆ. ಜೀವವಿಮಾ ನಿಗಮದಲ್ಲಿ ಉತ್ತಮ ಆಡಳಿತಗಾರರಾಗಿ ನಿಸ್ವಾರ್ಥ ಅಧಿಕಾರಿ ಎಂದು ಹೆಸರು ಪಡೆದವರಲ್ಲಿ ಇವರೂ ಒಬ್ಬರಾಗುತ್ತಾರೆ. ಪದೋನ್ನತಿಯೊಂದಿಗೆ ಹೈದ್ರಾಬಾದಿಗೆ ವರ್ಗಾವಣೆಯಾಗುತ್ತದೆ. ಅಲ್ಲಿಯೂ ಅವರು ತಮ್ಮ ವೃತ್ತಿಯ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ಪೋಶಿಸುವಲ್ಲಿ ಹಿಂದು ಬೀಳುವದಿಲ್ಲ. ಭಾರತೀಯ ಜೀವವಿಮಾ ನಿಗಮ ಹೈದ್ರಾಬಾದಿನಲ್ಲಿ ಕನ್ನಡ ಬುಲಟನ್ ಹೊರ ತರುತ್ತಾರೆ. ಹೈದ್ರಾಬಾದ ಮಹಿಳಾಮಂಡಳದಲ್ಲಿ ಕನ್ನಡ ನಾಟಕ ಮಾಡಿಸುವ ಕುರಿತು ಕರೆ ಬರುತ್ತದೆ. ಮಹಿಳಾ ಮಂಡಳ ಸದಸ್ಯರಿಗೆ (ಮಹಿಳೆಯರಿಗೆ) ನಾಟಕ ಕೂಡಿಸಿಕೊಡುತ್ತಾರೆ. ಜೀವವಿಮಾ ನಿಗಮದ ಮೇಲಾಧಿಕಾರಿ ಝೇನಲ್ ಮ್ಯಾನೇಜರ್ ಅವರ ಹೆಂಡತಿಗೆ ಆ ನಾಟಕದಲ್ಲಿ ಕಸ ಹೊಡೆಯುವ ಪಾತ್ರ ನೀಡುತ್ತಾರೆ. ನಾಟಕ ಚನ್ನಾಗಿ ಮೂಡಿಬಂದು ಜನರ ಮೆಚ್ಚುಗೆ ಗಳಿಸುತ್ತದೆ. ಝೇನಲ್ ಮ್ಯಾನೇಜರ್ ಅರವಿಂದರನ್ನು ತಮ್ಮ ಕ್ಯಾಬಿನ್ ಗೆ ಕರಿಸಿ ನನಗೆ ಅಸಾಧ್ಯವಾದದ್ದನ್ನು ನೀವು ಮಾಡಿ ತೋರಿಸಿದ್ರಿ ಎಂದು ನಗೆಚಾಟಿ ಬೀಸುತ್ತಾರೆ.
ಮತ್ತೆ ಎರಡು ವರ್ಷಗಳ ಅಂತರದಲ್ಲಿ ಹೈದ್ರಾಬಾದದಿಂದ ಬೆಂಗಳೂರಿಗೆ ವರ್ಗವಾಗುತ್ತದೆ. ಅಲ್ಲಿ ಕೆಲಸದ ಒತ್ತಡ ಹೆಚ್ಚಾಗಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಇಬ್ಬರೂ ದಂಪತಿಗಳು ನೊಂದದ್ದುಂಟು.
ಎಲ್.ಐ.ಸಿ ಕಚೇರಿಯ ಪಕ್ಕದಲ್ಲಿದ್ದ ಹೆಚ್.ಎನ್.ಕಲಾಕ್ಷೇತ್ರದಲ್ಲಿ ಹಲವು ನಾಟಕಗಳನ್ನು ನೋಡುವ ಅವಕಾಶ ಕೂಡಿ ಬರುತ್ತದೆ. ಸುಮಾರು ನೂರಕ್ಕೂ ಹೆಚ್ಚು ನಾಟಕಗಳನ್ನು ನೋಡಿದ ಅರವಿಂದರು ಹೇಳುವಂತೆ, ನಾಟಕಗಳನ್ನು ಮಾಡುವ ಮೊದಲು ನೋಡಿ ಕಲಿಯುವದು ಬಹಳಷ್ಟಿರುತ್ತದೆ. ನಾಟಕ ನೋಡುವುದರಿಂದ ಯಾವುದನ್ನ ಮಾಡಬೇಕು, ಯಾವುದನ್ನು ಮಾಡಬಾರದು ಎಂದು ತಿಳಿಯುತ್ತದೆ. ರಂಗಕರ್ಮಿಗೆ ನಿರಂತರ ಹುಡುಕಾಟ ಇರಬೇಕು. ಆತ ನಿತ್ಯ ವಿಧ್ಯಾರ್ಥಿಯಾಗಿರಬೇಕು.
ನಾಟಕಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅರಿವು ವಿಸ್ತರಿಸುವ ತರಬೇತಿ ನೀಡುವ ಮಾಧ್ಯಮವಾಗಿದೆ ಉದಾ:- ಮಾನವ ಅಭಿವೃದ್ಧಿ ಕ್ಷೇತ್ರದಲ್ಲಿ, ಮನೋವಿಜ್ಞಾನ ಕ್ಷೇತ್ರದಲ್ಲಿ, ಆರೋಗ್ಯ, ನೈರ್ಮಲ್ಯ, ಸಹಬಾಳ್ವೆ, ಕೋಮು ಸೌಹಾರ್ಧತೆ, ಕುಟುಂಬ ಯೋಜನೆ, ಹದಿಹರೆಯದ ಸಮಸ್ಯಗಳು, ಸಾಕ್ಷರತೆ, ವಯಸ್ಕರ ಶಿಕ್ಷಣ, ಜೀವವಿಮೆ ಇತ್ಯಾದಿ ವಿಷಯಗಳನ್ನು ಒಳಗೊಂಡಂತೆ ಅರಿವು ಮೂಡಿಸುವಲ್ಲಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿಯೂ ರಂಗಭೂಮಿ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಡಾ.ಅರವಿಂದರು ಜೀವವಿಮಾ ಎಜೆಂಟರಿಗೆ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಹಮ್ಮಿಕೊಂಡು, ತಾವೆ ನಾಟಕಗಳನ್ನು ಬರೆದು ಸ್ವತ: ಅಭಿನಯಿಸಿ ನಾಟಕಗಳನ್ನುಆಡಿಸುವ ಮೂಲಕ ಎಜೆಂಟರಲ್ಲಿ ಅರಿವನ್ನು ಮೂಡಿಸುತ್ತಾರೆ.
ಮತ್ತೆ ಬೆಂಗಳೂರಿನಿಂದ ಬೆಳಗಾವಿಗೆ ವರ್ಗವಾಗುತ್ತದೆ. ಕಚೇರಿ ಕೆಲಸದೊತ್ತಡಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ರಂಗಸಂಪದ ಸದಸ್ಯರಾಗಿ ಸಹಾಯ ಸಹಕಾರ ನೀಡುತ್ತ, ಜೀವವಿಮಾ ನಿಗಮದ ಸಾಂಸ್ಕೃತಿಕ ಕಾರ‌್ಯಕ್ರಮವೊಂದರಲ್ಲಿ ತಾವೆ ಬರೆದ ನಾಟಕದಲ್ಲಿ ರಂಗಕರ್ಮಿ ಹೆಸರಾಂತ ನಟ, ನಿರ್ದೇಶಕ ಶ್ರೀಪತಿ ಮಂಜನಬೈಲು ಅವರ ಪತ್ನಿ ಶೋಭಾ ಅವರಿಗೆ ನಾಟಕದಲ್ಲಿ ಅವಕಾಶ ಕಲ್ಪಿಸಿ ಮೊದಲ ಬಾರಿ ರಂಗಭೂಮಿಗೆ ಪರಿಚಯಿಸುತ್ತಾರೆ. ತಾವೂ ಬೆಳೆಯುವ ಜೊತೆಗೆ ಇತರರನ್ನು ಬೆಳೆಸಿರುವುದು ಇವರ ದೊಡ್ಡಗುಣವನ್ನು ತೋರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತವರು ಸಿಗುವುದು ತುಂಬಾ ವಿರಳವೆನ್ನಬಹುದು. ಇವರಲ್ಲಿ ಅಡಕವಾಗಿರುವ ಸಂಘಟನಾ ಚಾತುರ‌್ಯತೆ ಯಾರೆ ಆದರೂ ಮೆಚ್ಚುವಂತದ್ದು. ನಿಂತಲ್ಲಿ ನಿಲ್ಲದ ಕೂತಲ್ಲಿ ಕೂಡದ ಚಟುವಟಿಕೆ ಲವಲವಿಕೆಯ ಜೀವಿ ಇದು ಅವರ ತಾಯಿಯಿಂದ ಬಂದ ಬಳುವಳಿ.
ಭಾರತೀಯ ಜೀವವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಲ್ಲಿ 36 ವರ್ಷ ಸೇವೆಗೈದ ಅರವಿಂದರು 2015ರಲ್ಲಿ ಸೇವೆಯಿಂದ ನೀವೃತ್ತಿ ಹೊಂದಿ ತಮ್ಮನ್ನು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ರಂಗಕರ್ಮಿ ಡಾ.ಸಂಧ್ಯಾ ದೇಶಪಾಂಡೆ ಅವರ ನಿರ್ದೇಶನದಲ್ಲಿ “ದೇಹಬಾನ” ನಾಟಕದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ಅರವಿಂದರು ವೃತ್ತಿಯಿಂದ ನೀವೃತ್ತಿ ಹೊಂದಿದ್ದರೂ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದಾರೆ.ಇವರಲ್ಲಿ ಅಭಿನಯ, ನಾಟಕ ರಚನೆ, ನಾಟಕ ನಿರ್ದೇಶನ ಈ ಮೂರು ಪ್ರತಿಬೆಗಳು ಸಂಗಮಿಸಿವೆ.
ಶಾಲಾದಿನಗಳಲ್ಲಿ ಅಭಿನಯದಲ್ಲಿ ಆಸಕ್ತಿ ಬೆಳೆಸಿಕೊಂಡು ಕಲಿತದ್ದು ಕಲಿತದ್ದನ್ನು ಸರಳವಾದ ಕನ್ನಡದಲ್ಲಿ ಮಾತನಾಡಿದ್ದು, ಬರೆದದ್ದು ನೂರಾರು ನಾಟಕಗಳನ್ನು ನೋಡಿ-ಆಡಿ ಜೀರ್ಣಿಸಿಕೊಂಡ ಅನುಭವ ರಸಾಯನಿಕವಾಗಿದ್ದು ಇದರಿಂದ ರಂಗಭೂಮಿ ಆಯಾಮಗಳು ತಿಳಿದಿಕೊಳ್ಳಲು ಸಹಕಾರಿಯಾದವು ಎನ್ನುವ ಅರವಿಂದರು ಸಾಹಿತ್ಯ ರಂಗಭೂಮಿ, ವಿಜ್ಷಾನ, ಸಂಗೀತ, ಶಿಕ್ಷಣ, ಭಾಷೆ, ಸಂಸ್ಕೃತಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿ ನಾಟಕಕಾರರಾಗಿ, ನಿರ್ದೇಶಕರಾಗಿ ಈ ವರೆಗೆ ಅವರು ಅಂದಾಜು 55 ನಾಟಕಗಳಲ್ಲಿ ಅಭಿನಯಿಸಿದ್ದು, 3 ನಾಟಕಗಳನ್ನು ಬರೆದು ನಿರ್ದೇಶಿಸಿ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಒಂದು ಮುಖ್ಯ ಕೊಂಡಿಯಾಗಿದ್ದಾರೆ.
ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದರೂ ಬೆಳಗಾವಿಯ ರಂಗಸಂಪದ ನಾಟಕಗಳನ್ನು ನೋಡಲು ಮಾತ್ರ ತಮ್ಮನ್ನು ಸೀಮಿತ ಮಾಡಿಕೊಂಡಿದ್ದ ಡಾ.ಅರವಿಂದರಿಗೆ ಕುಂಟುತ್ತ ತೆವಳುತ್ತ ಸಾಗಿದ್ದ ರಂಗಸಂಪದ ಚಟುವಟಿಕೆಗಳಿಗೆ ಶಕ್ತಿ ತುಂಬಲು ಡಾ.ಅರವಿಂದ ಕುಲಕರ್ಣಿ ಅವರನ್ನು ರಂಗಸಂಪದ 2016ರಲ್ಲಿ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತದೆ. ತಟಸ್ಥವಾಗಿದ್ದ ರಂಗಸಂಪದ ರಂಗಭೂಮಿ ಚಟುವಟಿಕೆಗಳಿಗೆ ಚಾಲನೆ ನೀಡಿದ ಅರವಿಂದರು ಗತಿ, ಸುಖಗಳಿಂದ ದೂರವಾಗಿ, ನಾ ಸತ್ತಿಲ್ಲ, ಯು ಟರ್ನ, ಕವಿಗಳು ಸರ್ ಕವಿಗಳು, ಕಾಯುವ ಕಾಯಕ, ಪ್ರಿಂಟಿಂಗ್ ಮಶೀನ್, ಪಂಚಕನ್ಯಾ ಸ್ಮರೇ ನಿತ್ಯಂ ಮುಂತಾದ ನಾಟಕಗಳನ್ನು ತಯಾರುಮಾಡಿ ಬೆಳಗಾವಿ ಸೇರಿದಂತೆ ಬೆಂಗಳೂರು, ಉಡುಪಿ, ಮೈಸೂರು ರಂಗಾಯಣ, ಧಾರವಾಡ ರಂಗಾಯಣ, ರಂಗಶಂಕರ ಬೆಂಗಳೂರುಗಳಲ್ಲಿ ಪ್ರದರ್ಶನಮಾಡುತ್ತಾರೆ. ಈ ಎಲ್ಲ ನಾಟಕಗಳಲ್ಲಿ ಅರವಿಂದರು ತಮ್ಮ ಮನೋಜ್ಞ ಅಭಿನಯವನ್ನು ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. “ಸುಖಗಳಿಂದ ದೂರವಾಗಿ” ನಾಟಕವನ್ನು ಮರಾಠಿಯಿಂದ ಕನ್ನಡಕ್ಕೆ ಗುರುನಾಥ ಕುಲಕರ್ಣಿ ಹಾಗೂ ಅರವಿಂದರು ಜೊತೆಗೂಡಿ ಅನುವಾದಿಸಿದ್ದು, ಈ ನಾಟಕದಲ್ಲಿ ಸ್ವತ: ಮುಖ್ಯಪಾತ್ರದಲ್ಲಿ ಅರವಿಂದ ದಂಪತಿಗಳು ಅಭಿನಯಿಸಿದ್ದು, ಇವರ ಅಭಿನಯ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದೆ.
ಪಂಚಕನ್ಯಾ ಸ್ಮರೇ ನಿತ್ಯಂ ನಾಟಕವನ್ನು ಸ್ವತ: ಅರವಿಂದ ನಿರ್ದೇಶಿಸಿದ್ದು ರಂಗಾಯಣ ಮೈಸೂರಿನ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡು ಸಮರ್ಥ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿವೃತ್ತಿ ನಂತರ ರಂಗಭೂಮಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅರವಿಂದರು ಈ ವರೆಗೆ ಹಿಂತಿರುಗಿ ನೋಡುವ ಪ್ರಮಯವೇ ಬರಲಿಲ್ಲವೆಂದೆ ಹೇಳಬೇಕು. ಈಗ ರಂಗಸಂಪದ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು ಆರ್ಥಿಕವಾಗಿ ಸಬಲವಾಗಿಡಾ.ಅರವಿಂದ ಕುಲಕರ್ಣಿ ಅವರ ಮುಂದಾಳತ್ವದಲ್ಲಿ ಮುನ್ನೆಡೆಯುತ್ತಿದೆ.650 ಕ್ಕಿಂತ ಹೆಚ್ಚು ಪ್ರೇಕ್ಷಕ ಸದಸ್ಯರನ್ನು ಹೊಂದಿದರಂಗಸಂಪದ ಪ್ರತಿ ವರ್ಷ ತನ್ನ ಪ್ರೇಕ್ಷಕ ಸದಸ್ಯರಿಗೆ 10 ನಾಟಕಗಳನ್ನು ನೀಡುತ್ತ ಬಂದಿದ್ದು, ತಮ್ಮ ರಂಗಸಂಪದದಲ್ಲಿಯ ಯಶಸ್ಸಿಗೆ ಹೆಸರಾಂತ ನಟ, ನಿರ್ದೇಶಕ ರಂಗಕರ್ಮಿ ಶ್ರೀಪತಿ ಮಂಜನಬೈಲು ಕಾರಣರೆಂದು ಅರವಿಂದರು ಅಭಿಮಾನದಿಂದ ಹೇಳುತ್ತಾರೆ. ಕಳೆದ 49 ವರ್ಷಗಳಿಂದ ರಂಗಸಂಪದ ಹವ್ಯಾಸಿ ಕಲಾವಿದರ ತಂಡ ತನ್ನ ಚಟುವಟಿಕೆಗಳನ್ನು ಜೀವಂತವಾಗಿಟ್ಟಿದ್ದು ಅತೀ ಹಳೆಯ ಹವ್ಯಾಸಿ ಕಲಾ ತಂಡವೆಂದು ಬೆಳಗಾವಿ ಇತಿಹಾಸದಲ್ಲಿ ದಾಖಲಾಗಬೇಕಿರುವ ವಿಷಯವಾಗಿದೆ.
ಕರೋನಾ ಸಂದರ್ಭದಲ್ಲಿಯೂ ರಂಗಮಂದಿರಕ್ಕೆ ಬರಲು ಪ್ರೇಕ್ಷಕರು ಅಳುಕಿದಾಗಲೂ ಅರವಿಂದರು “ಶೋ ಮಸ್ಟ್ ಗೋ ಆನ್” ಎಂಬ ಸಂದೇಶದ ಮೇರೆಗೆ “ಮಿ ಟೂ “, “ಪಂಚಕನ್ಯಾ ಸ್ಮರೇ ನಿತ್ಯಂ”, ಹರಟೆ ಹೀಗೆ ರಂಗ ಚಟುವಟಿಕೆಗಳನ್ನು ಫೇಸ್‌ಬುಕ್ ಆನ್‌ಲೈನ್ ಲೈವ್ ನಲ್ಲಿ ನಾಟಕಗಳನ್ನು ಪ್ರದರ್ಶಿಸಿದರು. ಇದು ಕರ್ನಾಟಕದ ಇತಿಹಾಸದಲ್ಲಿ ಮೊದಲ ಪ್ರಯೋಗವಾಗಿ ದಾಖಲೆಯಾಗಿದೆ. ಈ ನಾಟಕಗಳನ್ನು ಸುಮಾರು 400 ಜನ ನೋಡಿ ಆನಂದಿಸಿದ್ದಾರೆ.
ಅದರಂತೆ ಬೆಳಗಾವಿಯ ರಂಗಸಂಪದ ಹವ್ಯಾಸಿ ಕಲಾ ತಂಡದ ಚಟುವಟಿಕೆಗಳನ್ನು ಗಮನಿಸಿ ಕರ್ನಾಟಕ ನಾಟಕ ಅಕಾಡಮಿ “ಅತ್ಯುತ್ತಮ ಹವ್ಯಾಸಿ ಕಲಾ ತಂಡ ದತ್ತಿ ಪ್ರಶಸ್ತಿ” ಯನ್ನು ರಂಗಸಂಪದ ಹವ್ಯಾಸಿ ತಂಡಕ್ಕೆ ನೀಡಿ ಗೌರವಿಸಿದೆ.
ಅರವಿಂದರ ಧರ್ಮಪತ್ನಿ ಪದ್ಮಾ ಕುಲಕರ್ಣಿ ಶಿಕ್ಷಣ ಮಹಾವಿಧ್ಯಾಲಯದ ನಿವೃತ್ತ ಪ್ರಾಂಶುಪಾಲರು ಹಾಗೂ ಕಲಾವಿದೆ ಅರವಿಂದರ ಹೆಗಲಿಗೆ ಹೆಗಲು ಸೇರಿಸಿ ಇವರ ಯಶಸ್ಸಿಗೆ ಕಾರಣರಾಗಿದ್ದು ರಂಗಭೂಮಿಯ ಎಲ್ಲಾ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು ಅಭಿನಯ ನಾಟಕ ರಚನೆ ನಾಟಕ ನಿರ್ದೇಶನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರವಿಂದ ಅವರದು 68ರ ಇಳಿಯ ವಯಸ್ಸಿನಲ್ಲಿಯೂ ಅತ್ಯಂತ ಚಟುವಟಿಕೆಯ ವ್ಯಕ್ತಿತ್ವ.
ನಾವು ಬಿಟ್ಟು ಹೋಗುವ ಸಮಾಜದ, ದೇಶದ ಹೊರೆಯನ್ನು ಭಾವಿ ನಾಗರೀಕರಾಗಿರುವ ಮಕ್ಕಳು ತಾನೆ ಹೊರಬೇಕು ಎನ್ನುವ ಅರವಿಂದರು ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ಆತ್ಮ ವಿಶ್ವಾಸ ಸಾಹಿತ್ಯ ಸಜ್ಜುಗೊಳಿಸುವ, ನಿಟ್ಟಿನಲ್ಲ್ಲಿಪ್ರತಿ ವರ್ಷ ಮಕ್ಕಳಿಗೆ ಎಪ್ರೀಲ್ ಮಾಹೆಯಲ್ಲಿ “ಸೃಜನಾ ಕಲಾ ಶಿಬಿರವನ್ನು” ಹಮ್ಮಿಕೊಂಡು ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಷಯಗಳನ್ನು ಮನಮುಟ್ಟುವುಂತೆ ತಿಳಿ ಹೇಳುವ ಅರವಿಂದರು ಜೀವನದಲ್ಲಿ ಎನೇ ಕಷ್ಟ ಬಂದರೂ ಎದುರಿಸುವ ಧೈರ್ಯ, ಸೌಂದರ್ಯ ಪ್ರಜ್ಞೆ, ಮಾತನಾಡುವ ಕಲೆ, ಏನೂ ಕೆಲಸಕೊಟ್ಟರೂ ಅದನ್ನು ಮಾಡುವೆನೆಂಬ ಕಿಚ್ಚು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮೊದಲಾದ ಗುಣಗಳು ಎಳೆಯ ವಯಸ್ಸಿನಲ್ಲಿಯೇ ಮೈಗೂಡಿಸಿಕೊಳ್ಳುವ ತರಬೇತಿಯನ್ನು ಮಕ್ಕಳಿಗೆ ಶಿಬಿರದಲ್ಲಿ ನೀಡುವುದರೊಂದಿಗೆ ನಾಟಕ ಸ್ಪರ್ದೆಗಳಲ್ಲಿ ಸ್ಪರ್ಧಿಸುವಂತೆ ಮಕ್ಕಳನ್ನು ಹುರುದುಂಬಿಸಿ ತಾಲೀಮು ನೀಡುವುದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿಜವಾದ ವ್ಯಕ್ತಿತ್ವದ ವಿಕಸನವಾದರೆ ಅದೇ ನಿಜವಾದ ಶಿಕ್ಷಣವೆನ್ನುವುದು ಅವರ ಅಭಿಪ್ರಾಯ.
ರಂಗಕರ್ಮಿ ಡಾ.ಅರವಿಂದ ಕುಲಕರ್ಣಿ ಅವರು ರಂಗಭೂಮಿಗೆ ಸಲ್ಲಿಸಿದ ಸೇವೆ ಅಪಾರವಾಗಿದ್ದು ಧಾರವಾಡದ ಸ್ನೇಹ ಪ್ರತಿಷ್ಠಾನವು ಇವರ ರಂಗಭೂಮಿಯ ಜೀವಮಾನ ಸಾಧನೆಗಾಗಿ 22-23 ನೇ ಸಾಲಿನ “ಆಜೀವಮಾನ ಸಾಧನಾ ರಂಗ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದೆ.
ನಾವು ನನ್ನದು ಎನ್ನುವುದು ನಶ್ವರ ಸ್ವಾರ್ಥ ಜೀವನಕ್ಕೆ ಬೆಲೆ ಇಲ್ಲ. ನಾವು ಎಷ್ಟು ದಿನ ಬದಿಕಿದೆವು ಅನ್ನುವುದಕ್ಕಿಂತ ಹೇಗೆ ಬದುಕಿದೆವು ಎನ್ನುವುದು ಮುಖ್ಯ. ಎನ್ನುವ ಅರವಿಂದರು ತಮಗೆ ಸಾಧ್ಯವಾದಾಗಲೆಲ್ಲ ವೃದ್ಧಾಶ್ರಮಗಳಿಗೆ ಹಾಗೂ ಅನಾಥಾಶ್ರಮಗಳಿಗೆ ದಂಪತಿಗಳಿಬ್ಬರು ಭೇಟಿ ಕೊಟ್ಟು ಅವರೊಂದಿಗೆ ಕಾಲ ಕಳೆದು ಬರುವ ಪರಿಪಾಟ ಇಟ್ಟುಕೊಂಡಿದ್ದಾರೆ. ಬಡ ವಿಧ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಧನ ಸಹಾಯವನ್ನು ನೀಡುತ್ತಾ ಬಂದಿದ್ದಾರೆ.
ಆರೋಗ್ಯಕರ ಮನಸ್ಸುಳ್ಳ ಯುವ ಜನತೆಯನ್ನು ರೂಪಿಸುವದು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಿದೆ ಅರವಿಂದರು ರಂಗಭೂಮಿಗೆ ದೊಡ್ಡ ಆಸ್ತಿ ಎಂದರೆ ತಪ್ಪಾಗುವುದಿಲ್ಲ. ಅವರ ಬದುಕಿನ ನಡೆಯಲ್ಲಿ ಹವ್ಯಾಸಿ ರಂಗಭೂಮಿಯ ಸಾಧನೆಯ ಹೆಜ್ಜೆಗಳನ್ನು ತಿಳಿಸುವ ಪ್ರಯತ್ನ ನನ್ನದು. ಹೀಗೆ ಇವರ ವ್ಯಕ್ತತ್ವ ಅನಾವರಣ ಮಾಡುತ್ತಾ ಹೋದಂತೆ ಮುಗಿಯುವದೇ ಇಲ್ಲ. ಇಂದಿನ ರಂಗಭೂಮಿಗೆ ಸಂಶೋಧನ ಗುಣವನ್ನು ಹೊಂದಿರುವ ಕಲಾವಿದರು ಬೇಕಾಗಿದ್ದಾರೆ. ಅಂದರೆ ರಂಗಭೂಮಿಯು ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದೆನಿಸುತ್ತದೆ.
- ಅನಂತ ಪಪ್ಪು
ಮೊ: 9448527870
- * * * -