ತುಮಕೂರು, ಏ 15, ಡಾ. ಬಿ. ಆರ್. ಅಂಬೇಡ್ಕರ್ ದೇಶ ಕಂಡ ಮಹಾನ್ ಮಾನವತಾವಾದಿ. ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಅವರ ೧೨೯ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಅವರ ತತ್ವಾದರ್ಶ ಹಾಗೂ ಹೋರಾಟದಿಂದಾಗಿ ಭಾರತದಲ್ಲಿ ಪ್ರತಿಯೊಬ್ಬರೂ ಘನತೆ, ಗೌರವ ಹಾಗೂ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ ಎಂದರು.ಅಂಬೇಡ್ಕರ್ ಅವರು ಆತ್ಮಾಭಿಮಾನದ ಸಂಕೇತವಾಗಿದ್ದರು.
ಅವರು ಭಾರತವನ್ನು ವಿಶ್ವಕ್ಕೆ ಹೊಸ ರೀತಿ ಪರಿಚಯಿಸಿದರು. ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದ ಚೌಕಟ್ಟಿನಲ್ಲಿ ಮುಂದುವರಿಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಬಿ. ರಮೇಶ್ ಮಾತನಾಡಿ, ಅಂಬೇಡ್ಕರ್ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡರು. ಅವರ ಅವಿರತ ಶ್ರಮದ ಫಲವಾದ ಸಂವಿಧಾನವು ಬಹುತ್ವ ಸಿದ್ಧಾಂತವಾಗಿ ಫಲನೀಡುತ್ತಿದೆ. ಹಾಗಾಗಿ, ವಿಭಿನ್ನ ಜಾತಿ, ಧರ್ಮ, ಸಂಸ್ಕೃತಿಗಳುಳ್ಳ ಜನರು ಸುಮಾರು ೭೦ ವರ್ಷಗಳಿಂದ ಬ್ರಾತೃತ್ವದಿಂದ ಜೀವನ ನಡೆಸಲು ಸಾದ್ಯವಾಗುತ್ತಿದೆ. ಅಗಾಧ ಪಾಂಡಿತ್ಯ ಹೊಂದಿದ್ದ ಬಾಬಾ ಸಾಹೇಬರು ಓರ್ವ ಪ್ರಜಾಪ್ರಭುತ್ವವಾದಿ ನಾಯಕ, ಅಪ್ರತಿಮ ಆರ್ಥಿಕ ತಜ್ಞ, ಮತ್ತು ಸಮಾನತಾವಾದಿಯಾಗಿದ್ದರು ಎಂದರು.ಸರ್ಕಾರದ ಆರೋಗ್ಯ ಸುರಕ್ಷತಾ ನಿಯಮಾನುಸಾರ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಲಾದ ಈ ಕಾರ್ಯಕ್ರಮದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಂ. ಕೊಟ್ರೇಶ್, ಡಾ. ಬಿ. ಆರ್. ಅಂಬೇಡ್ಕರ್ ಕೇಂದ್ರದ ನಿದೇರ್ಶಕ ಡಾ. ಬಸವರಾಜ ಜಿ. ಉಪಸ್ಥಿತರಿದ್ದರು.