ರಕ್ತದಾನ ಮಾಡುವುದು ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ: ಮಹೇಶ ಬಾಕಳೆ

ರಕ್ತದಾನ ಮಾಡುವುದು ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ: ಮಹೇಶ ಬಾಕಳೆ Donating blood is not for publicity, but for inspiration: Mahesh Bakale

ವರದಿ: ಸಂತೋಷಕುಮಾರ ಕಾಮತ  

ಮಾಂಜರಿ 29: ಸ್ವಾರ್ಥದ ಕಾಲದಲ್ಲಿ ನಿಸ್ವಾರ್ಥ ಸೇವೆ ತೋರಿಸುವವರ ಸಂಖ್ಯೆ ಕಡಿಮೆ. ರಕ್ತದಾನ ಮಾಡುವುದು ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ, ಈ ಒಂದು ವಾಕ್ಯವೇ ಚಿಕ್ಕೋಡಿ ತಾಲೂಕಿನ ಯಕ್ಷಂಬಾ ಪಟ್ಟಣದ ಮಹೇಶ ಬಾಕಳೆ ಅವರ ಜೀವನದ ಸಾರವಾಗಿದೆ.  

ಕೇವಲ ಮಾತಲ್ಲ, ಅವರು ಅದನ್ನು ತಮ್ಮ ಬದುಕಿನ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ 49ನೇ ಬಾರಿ ರಕ್ತದಾನ ಮಾಡುವ ಮೂಲಕ ಅವರು ಸೇವಾಭಾವ, ಮಾನವೀಯತೆ ಮತ್ತು ಸಾಮಾಜಿಕ ಕಳಕಳಿಯ ನಿಜವಾದ ಅರ್ಥವನ್ನು ಮತ್ತೊಮ್ಮೆ ನೆನಪಿಸಿದ್ದಾರೆ. 

ಮಹೇಶ ಬಾಕಳೆ ಅವರಲ್ಲಿ ಸಾಮಾಜಿಕ ಕಳಕಳಿ ಬಾಲ್ಯದಿಂದಲೇ ಬೇರೂರಿದೆ. ಸಮಾಜದಲ್ಲಿ ಯಾರಿಗಾದರೂ ತುರ್ತು ನೆರವು ಬೇಕಾದರೆ ಮೊದಲು ಮುಂದೆ ಬರುವ ವ್ಯಕ್ತಿ ಎಂದು ಸ್ಥಳೀಯರು ಅವರನ್ನು ವರ್ಣಿಸುತ್ತಾರೆ. ವಿಶೇಷವಾಗಿ ರಕ್ತದಾನ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶಿಕ್ಷಣದ ಬೆಂಬಲ ಮತ್ತು ಯುವಕರಲ್ಲಿ ಸಾಮಾಜಿಕ ಬದ್ಧತೆ ಬೆಳೆಸುವಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.ಮಹೇಶ ಅವರು ಕಳೆದ 2000 ಇಸ್ವಿಯಿಂದ ಪ್ರತಿ ವರ್ಷ ರಕ್ತದಾನ ಮಾಡುತ್ತಾ ಬಂದಿದ್ದಾರೆ.ಇತ್ತೀಚೆಗೆ ತಮ್ಮ ಪರಿಚಿತನ ಅತ್ತಿಗೆಗೆ ತುರ್ತು ರಕ್ತದ ಅವಶ್ಯಕತೆ ಉಂಟಾದಾಗ, ಕ್ಷಣವೂ ತಡ ಮಾಡದೆ ಬೆಳಗಾವಿಯ ಕೆ.ಎಲ್‌.ಇ. ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಿದರು. ಅವರಿಗಿದು ಹೊಸದು ಅಲ್ಲ ಕಳೆದ ಹಲವಾರು ವರ್ಷಗಳಿಂದ, ಅವರು ಯಾರೇ ಕರೆದರೂ ಸ್ವಂತ ಖರ್ಚಿನಿಂದ, ಯಾವುದೇ ಫಲಾಪೇಕ್ಷೆಯಿಲ್ಲದೆ, ದೂರದ ಆಸ್ಪತ್ರೆಗೂ ತೆರಳಿ ರಕ್ತದಾನ ಮಾಡುವ ಕಾಯಕ ಬೆಳೆಸಿಕೊಂಡಿದ್ದಾರೆ. 

ಸಮಾಜ ಸೇವೆಯ ನಿಸ್ವಾರ್ಥ ಹಾದಿ: ರಕ್ತದಾನ ಮಾತ್ರವಲ್ಲ, ಮಹೇಶ ಬಾಕಳೆ ಅವರು ಯಕ್ಸಂಬಾ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸದಾ ಸಕ್ರಿಯರಾಗಿದ್ದಾರೆ. ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದು, ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಪರಿಸರ ದಿನದಂದು ಸಸಿ ನೆಡುವ ಕಾರ್ಯಕ್ರಮ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ನೆರವಿಗೆ ಧಾವಿಸುವುದು, ರಕ್ತದಾನ ಶಿಬಿರಗಳಲ್ಲಿ ಯುವಕರನ್ನು ಪ್ರೇರೇಪಿಸುವುದು ಇವು ಎಲ್ಲವೂ ಅವರ ದಿನಚರಿಯ ಭಾಗವಾಗಿದೆ. 

ರಕ್ತದ ಕೊರತೆಯಿಂದ ಜೀವನ, ಮರಣದ ಹೋರಾಟದಲ್ಲಿರುವ ಮನುಷ್ಯನಿಗೆ ಅತ್ಯವಶ್ಯಕವಾದದ್ದು ರಕ್ತ. ರಕ್ತದ ಒಂದೊಂದು ಹನಿ ಕೂಡ ಜೀವ ಉಳಿಸುತ್ತದೆ. ಇಂಥಹ ಪುಣ್ಯದ ಕೆಲಸವನ್ನು ಮಹೇಶ ಬಾಕಳೆ ಮಾಡುತ್ತಿದ್ದಾರೆ. ಸುಮಾರು 49 ಬಾರಿ ರಕ್ತದಾನ ಮಾಡಿ ಅರ್ಧ ಶತಕದ ಮೆಟ್ಟಿಲು ಹತ್ತಿದ್ದಾರೆ. ಮಹೇಶ ಮಾಡುವ ಸಮಾಜ ಸೇವೆ ಅನನ್ಯ. 

ಗಣೇಶ ಮೋಪಗಾರ, ನಿವೃತ್ತ ಸಾರಿಗೆ ಸಿಬ್ಬಂದಿ ಯಕ್ಸಂಬಾ 

ಮಹೇಶ ಬಾಕಳೆ ಅವರು ಸ್ಥಳೀಯ ಯುವಕರಿಗೆ ಸ್ಫೂರ್ತಿ. ಅನೇಕ ಯುವಕರು ಅವರ ಪ್ರೇರಣೆಯಿಂದ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದಾರೆ.. ಅವರು ಪ್ರಚಾರ ಮಾಡೋದಿಲ್ಲ ಕೆಲಸ ಮಾಡ್ತಾರೆ. ಅವರ ನಿಸ್ವಾರ್ಥತನದಿಂದ ನಾವು ಸಹ ಸಮಾಜದತ್ತ ಕಳಕಳಿಯಿಂದ ನೋಡುತ್ತಿದ್ದೇವೆ.  

ನಿಖಿಲ ಕಮತಿ ಸ್ಥಳೀಯರು