ದ್ವಿಭಾಷಾ ಶಿಕ್ಷಣ ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ

ದ್ವಿಭಾಷಾ ಶಿಕ್ಷಣ ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ District-level workshop for capacity building of bilingual education teachers

ಲೋಕದರ್ಶನ ವರದಿ 

   ಧಾರವಾಡ  24: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಹಾಗೂ ದಕ್ಷಿಣ ಭಾರತದ ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ (ಆರ್‌ಐಇಎಸ್‌ಐ), ಬೆಂಗಳೂರು ಹಾಗು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ‘ದ್ವಿಭಾಷಾ ಶಿಕ್ಷಣ ಶಿಕ್ಷಕರ ಸಾಮರ್ಥ್ಯ ವೃದ್ಧಿ' ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವು ಡಯಟ್‌ನಲ್ಲಿ ಯಶಸ್ವಿಯಾಗಿ ನಡೆಯಿತು. 

   ಬೆಳಗಾವಿ ವಿಭಾಗದ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿಯವರು ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ, ದ್ವಿಭಾಷಾ ಶಿಕ್ಷಣದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿರಂತರ ಶೈಕ್ಷಣಿಕ ಬೆಂಬಲ ನೀಡುವಂತೆ ಕರೆ ನೀಡಿದರು. ಈ ಕಾರ್ಯಾಗಾರದಲ್ಲಿ ಧಾರವಾಡ ಜಿಲ್ಲಾ ಸಂಪನ್ಮೂಲ ತಂಡದ (ಡಿಆರ್‌ಟಿ) ಸದಸ್ಯರು, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ(ಎಸ್‌ಆರ್‌ಪಿ) ಹಾಗೂ ಜಿಲ್ಲೆಯ ಎಲ್ಲ ಸಿ.ಆರ್‌.ಪಿಯವರು ಜಿಲ್ಲಾ ಹಂತದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ವರ್ಷಪೂರ್ತಿ ಶಿಕ್ಷಕರಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುವ ಉದ್ದೇಶದಿಂದ ಅನುಭವ ಹಂಚಿಕೆ, ತರಗತಿ ಸವಾಲುಗಳು, ಮೂಲಭೂತ ಮೌಲ್ಯಮಾಪನ, ಪಠ್ಯಪುಸ್ತಕ ಆಧಾರಿತ ಇಂಗ್ಲಿಷ್ ಬೋಧನೆ, ತರಗತಿ ಭಾಷೆಯ ಬಳಕೆ ಹಾಗೂ ಇಂಗ್ಲಿಷ್, ಪರಿಸರ ಅಧ್ಯಯನ, ಗಣಿತ ಮತ್ತು ಕನ್ನಡ ಪಠ್ಯಪುಸ್ತಕಗಳ ಪರಿಣಾಮಕಾರಿ ಬಳಕೆಯ ಕುರಿತು ತರಬೇತಿ ನೀಡಲಾಯಿತು. 

   ಕಾರ್ಯಾಗಾರದಲ್ಲಿ ಡಯಟ್‌ನ ಪ್ರಾಂಶುಪಾಲರಾದ ಬಸವರಾಜ ನಾಲವತವಾಡ, ಮೇಲ್ವಿಚಾರಕರಾಗಿ ಸಿಟಿಇ ಬೆಳಗಾವಿಯ ಉಪನ್ಯಾಸಕಿ ಎ ಜಿ ಪಾಟೀಲ ಆಗಮಿಸಿದ್ದರು. ಉಪ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಜೆ.ಜಿ.ಸಯ್ಯದ, ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು. ಕುಮಾರ ಹುಲಗೂರ ಕಾರ್ಯಕ್ರಮವನ್ನು ನಿರೂಪಿಸಿದರು. 

    ಮೊದಲ ಅವಧಿಯನ್ನು ಜೆ.ಜಿ.ಸಯ್ಯದ್ ಹಾಗೂ ಕುಮಾರ ಹುಲಗೂರ ಎರಡನೆಯ ಅವಧಿಯನ್ನು ತಬಸ್ಸುಮ ಪಟ್ಟಣ ಹಾಗೂ ಮೆಹಬೂಬಸಾಬ್ ನಧಾಪ್, ಮೂರನೆಯ ಅವಧಿಯನ್ನು ರಾಜು ಭೂಶೆಟ್ಟಿ ಹಾಗೂ ಡಾ. ರೇಣುಕಾ ಅಮಲಝರಿ, ನಾಲ್ಕನೆ ಅವಧಿಯನ್ನು ಐ.ಜಿ.ವೆಂಕಟಾಪುರಮಠ ಹಾಗೂ ಮಂಜುಳಾ ರಾಜೋಳ್ಳಿ ನಡೆಸಿಕೊಟ್ಟರು. ಜುಲೈ 2026ರಿಂದ ಮಾರ್ಚ್‌ 2027ರವರೆಗೆ ಡಿಆರ್‌ಟಿ ಮತ್ತು ಎಂಆರ್‌ಪಿಗಳು ರಾಜ್ಯದಾದ್ಯಂತ ಸುಮಾರು 65,000 ಶಿಕ್ಷಕರಿಗೆ ಕಾರ್ಯಾಗಾರಗಳು, ಆನ್‌ಲೈನ್ ಅನುಸರಣಾ ಸಭೆಗಳು, ತರಗತಿ ಮಾರ್ಗದರ್ಶನ ಹಾಗೂ ನಿರಂತರ ಶೈಕ್ಷಣಿಕ ಬೆಂಬಲವನ್ನು ಒದಗಿಸಲಿದ್ದಾರೆ.