ಮಳೆ ಅಭಾವ, ಸಮಸ್ಯೆ ಎದುರಿಸಲು ಸಜ್ಜಾಗಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ಮಳೆ ಅಭಾವ, ಸಮಸ್ಯೆ ಎದುರಿಸಲು ಸಜ್ಜಾಗಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ District in-charge minister instructs officials to be prepared to deal with rain shortage, problems

ಲೋಕದರ್ಶನ ವರದಿ 

         ವಿಜಯಪುರ   23: ಜಿಲ್ಲೆಯಲ್ಲಿ ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ಮುಂದೆ ಉಲ್ಬಣಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಜನಜಾನುವಾರುಗಳಿಗೆ ಕುಡಿಯುವ ನೀರು, ಬಿತ್ತನೆ ಬೀಜ, ರಸಗೊಬ್ಬರ ಮೇವು ಎಲ್ಲ ವಿಚಾರ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾಗಿ ಸಚಿವರು ತಿಳಿಸಿದರು. ಜುಲೈ ಎರಡನೇ ವಾರ ಮಳೆ ಬರಬಹುದೆಂದು ಹವಾಮಾನ ಇಲಾಖೆ ಹೇಳಿದೆ. ಕುಡಿಯುವ ನೀರಿನ ಸಮಸ್ಯೆಯಾದ ಸಂದರ್ಭದಲ್ಲಿ ಆದಾಗ್ಯೂ ಬೋರ್ ವೆಲ್ ಕೊರೆಯಿಸಿ, ವಿದ್ಯುತ್ ಅಳವಡಿಸಿ ನೀರು ಪೂರೈಸಲು ಸಮಯ ಬೇಕಾಗುತ್ತದೆ. ಆದರೆ, ಖಾಸಗಿ ಬೋರ್ ವೆಲ್ ಗಳನ್ನು ಗುರುತಿಸಿಕೊಟ್ಟುಕೊಳ್ಳಲು ಸೂಚಿಸಿದ್ದಾಗಿ ಸಚಿವರು ತಿಳಿಸಿದರು. 

ತಾಜ್ ಬಾವಡಿ ನೀರನ್ನು ಅನ್ಯ ಉದ್ಧೇಶಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ಅನಿವಾರ್ಯ ಸಂದರ್ಭದಲ್ಲಿ ಖಾಸಗಿ ಬೋರವೆಲ್ ಗಳಿಂದ  ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದೂ ಸೂಚಿಸಿದ್ದಾಗಿ ಸಚಿವರು ತಿಳಿಸಿದರು. 

ವಿದ್ಯುತ್ ಸಮಸ್ಯೆ ಏನಿಲ್ಲ. ಬೀಜ ರಸಗೊಬ್ಬರ ಸಾಕಷ್ಟು ದಾಸ್ತಾನು ಇದೆ. ಜೋಳಕ್ಕೆ ಜಿಐ ಟ್ಯಾಗ್ ಪಡೆದುಕೊಳ್ಳಲು ಸೂಚಿಸಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದ ಅವರು, ಈ ವಿಷಯದಲ್ಲಿ ಜಿಲ್ಲಾಧಿಕಾರಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಣ ದ್ರಾಕ್ಷಿ ಹಾಗೂ ದ್ರಾಕ್ಷಿಗೂ ಟ್ಯಾಕ್ ನೀಡಲು ಸೂಚಿಸಿದ್ದಾಗಿ ತಿಳಿಸಿದರು. ಕೃಷ್ಣಾ ನದಿಯಿಂದ ನಗರಕ್ಕೆ ಇನ್ನೊಂದು ನೀರು ಸ್ಟೇಜ್ ನಿರ್ಮಾಣಕ್ಕೆ  ಡಿಪಿಆರ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಕುಡಿವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರು ಪ್ರತಿ ವಾರ ಸಭೆ ನಡೆಸಲು ತಿಳಿಸಿದ್ದೇನೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ನಾನು ಸಭೆ ನಡೆಸಿ ಪರೀಶೀಲನೆ ನಡಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ಶಾಸಕರಾದ ವಿಠ್ಠಲ ಕಟಕಧೋಂಡ,ರಾಜುಗೌಡ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ.ಕೆ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.