ಶಿವಮೊಗ್ಗ, ಏ.17, ನಗರದ ಇಂದಿರಾ ಬಡಾವಣೆಯ ಕೂಲಿಕಾರ್ಮಿಕರಿಗೆ ಜನಶಕ್ತಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮಾಜಿ ಸಂಸದ, ಮೇಲ್ಮನೆ ಸದಸ್ಯರೂ ಆಗಿರುವ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಉಚಿತ ತರಕಾರಿಗಳನ್ನು ಇಂದು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.ಆಯನೂರು ಮಂಜುನಾಥ್ ಮಾತನಾಡಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರು ಕೂಲಿ ಕಾರ್ಮಿಕರು ಸೇರಿದಂತೆ ಯಾರಿಗೂ ಆಹಾರದ ಕೊರತೆಯಾಗದಂತೆ ಸರ್ಕಾರ ದಿಟ್ಟ ಕ್ರಮಕೈಗೊಂಡಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚೆತ್ತುಕೊಳ್ಳಲಾಗಿದೆ.
ಉಚಿತ ಪಡಿತರವನ್ನು ಸಹ ವಿತರಿಸಲಾಗುತ್ತಿದೆ. ಕೂಲಿಕಾರ್ಮಿಕರು ಬಡವರಿಗೆ ಸಹಕರಿಸಲು ಸರ್ಕಾರದ ಜೊತೆ ಕೈಜೋಡಿಸುವವರಿಗೆ ಮುಕ್ತ ಅವಕಾಶವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆ ಸರ್ಕಾರದ ಸೂಚನೆ ನಿರ್ದೇಶನ ಪಾಲಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಜನಶಕ್ತಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಪರಂಧಾಮ ರೆಡ್ಡಿ, ಶಲ ರವಿ,ಪ್ರಧಾನ ಕಾರ್ಯದರ್ಶಿ ಪ್ರಕಾಶ, ಜನಶಕ್ತಿ ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.