ಲೋಕದರ್ಶನ ವರದಿ
ಕಾಗವಾಡ 19: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಕಾಗವಾಡ ತಾಲೂಕಿನ ಉಗಾರ ಸೇರಿದಂತೆ ಇನ್ನೂಳಿದ ಕಾಳಜಿ ಕೇಂದ್ರಗಳಲ್ಲಿ ಸ್ಥಳಾಂತರಿಸಿದ ಜಾನುವಾರಗಳಿಗೆ 20 ಟನ್ ಮೇವು ವಿತರಿಸಲಾಯಿತು.
ಕಾಗವಾಡ ತಾಲೂಕಿಗೆ ಸಿಂದನೂರ ತಾಲೂಕಿನ ವಿರಪಾಪೂರ ಗ್ರಾಮ ಹಾಗೂ ಹಟ್ಟಿ ಗ್ರಾಮಸ್ಥರ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಚಾಲಿತ ನೆರೆ ಸಂತ್ರಸ್ತ ಪರಿಹಾರ ಸಮಿತಿ ಅಥಣಿ ಹಾಗೂ ಕಾಗವಾಡ ಇವರಿಂದ 3 ಲಾರಿಗಳಷ್ಟು ಸುಮಾರು 20 ಟನ್ನದಷ್ಟು ಜೋಳ ಹಾಗೂ ಭತ್ತದ ಒಣ ಮೇವುಪೂರೈಸಿದರು.
ಸಂತ್ರಸ್ಥ ಗ್ರಾಮಗಳಾದ ಕೃಷ್ಣಾ-ಕಿತ್ತೂರ, ಬಣಜವಾಡ, ಕಾತ್ರಾಳ, ಐನಾಪೂರ(ಹುನಚಿಕೋಡಿ) ಹಾಗೂ ಉಗಾರ-ಖುರ್ದ ಒಟ್ಟು 16 ಗಂಜಿ ಕೇಂದ್ರಗಳ ಜಾನುವಾರುಗಳಿಗೆ ಪೂರೈಸಲಾಯಿತು ಎಂದು ಆರ್.ಎಸ್.ಎಸ್. ಕಾರ್ಯಕರ್ತ ಅನೀಲ ನಾವಿಲಗೇರ ಹೇಳಿದರು.
ಅವರೊಂದಿಗೆ ಯೋಗೇಶ ಕುಂಬಾರ, ವಿಕಾಸ ಗಿಜವನೆ, ಸಚೀನ ಶಿಂದೆ, ರಮೇಶ ಬೋಗಿ, ಅಜೀತ ಭೋಸಲೆ ಹಾಗೂ ಇನ್ನೂಳಿದ ಎಲ್ಲ ಸಂಘದ ಸದಸ್ಯರು ಮೇವು ಪೂರೈಸಲು ಸಹಕರಿಸಿದರು.