ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ

ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ  Distribution of sowing seeds for the monsoon season begins

ಬೀದರ್ 28: ಈ ಬಾರಿ ಉತ್ತಮ ಮಳೆಯಾಗುವ ನೀರೀಕ್ಷೆ ಇದ್ದು, ರೈತರು ಸಮಯಕ್ಕೆ ಸರಿಯಾಗಿ ಬಿತ್ತನೆ ಕಾರ್ಯ ಆರಂಭಿಸಬೇಕು. ಸರ್ಕಾರದ ವತಿಯಿಂದ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ರೈತರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ರೈತರು ಯಾವುದೇ ಮಧ್ಯವರ್ತಿಗಳ ಮಾತಿಗೆ ಒಳಗಾಗದೆ ಕೃಷಿ ಇಲಾಖೆಯ ಸಲಹೆ ಪಡೆದು ಬೆಳೆ ಬೆಳೆಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.  

ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸೋಯಾಬೀನ್, ತೊಗರಿ, ಹೆಸರು ಹಾಗೂ ಉದ್ದು ಬೆಳೆಗಳು ರೈತರಿಗೆ ಉತ್ತಮ ಆದಾಯ ತರುವ ಬೆಳೆಗಳಾಗಿದ್ದು, ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಇನ್ನಷ್ಟು ಉತ್ತಮ ಉತ್ಪಾದನೆ ಪಡೆಯಬಹುದು. ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯುವತ್ತ ಗಮನ ಹರಿಸಬೇಕು ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬ ರೈತನಿಗೂ ಅದರ ಸೌಲಭ್ಯ ತಲುಪಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು. ನಮ್ಮ ಬೀದರ್ ದಕ್ಷಿಣ ಕ್ಷೇತ್ರ ಕೃಷಿ ಪ್ರಧಾನ ಕ್ಷೇತ್ರವಾಗಿದೆ. ಇಲ್ಲಿನ ರೈತರು ಶ್ರಮಜೀವಿಗಳು. ನಿಮ್ಮ ಪರಿಶ್ರಮದಿಂದಲೇ ಈ ಭಾಗದ ಅಭಿವೃದ್ಧಿ ಸಾಧ್ಯವಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ. ನೀರಾವರಿ, ರಸ್ತೆ, ವಿದ್ಯುತ್, ಕೃಷಿ ಸಂಪರ್ಕ ರಸ್ತೆ ಸೇರಿದಂತೆ ರೈತರ ಅನುಕೂಲಕ್ಕೆ ಬೇಕಾದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ನಾನು ಸದಾ ಆದ್ಯತೆ ನೀಡುತ್ತೇನೆ.ಈ ಕಾರ್ಯಕ್ರಮದ ಮೂಲಕ ರೈತರಿಗೆ ಸಮಯಕ್ಕೆ ಸರಿಯಾಗಿ ಬೀಜ ಹಾಗೂ ರಸಗೊಬ್ಬರ ವಿತರಣೆ ಆಗುತ್ತಿರುವುದು ಸಂತಸದ ವಿಚಾರ. ರೈತರು ಗುಣಮಟ್ಟದ ಬೀಜ ಬಳಸಿ ಉತ್ತಮ ಬೆಳೆ ಬೆಳೆಯಬೇಕು. ಕೃಷಿಯಲ್ಲಿ ನಷ್ಟವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ರೈತರಿಗೆ ಶುಭ ಹಾರೈಸಿದರು.  

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್, ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್,   ಮುಖಂಡರಾದ ಅನೀಲ್ ಪನ್ನಾಳೆ, ಚಂದು ಮಡಕಿ, ವಿಜಯಕುಮಾರ ಗಣಪುರ, ಮಲ್ಲಿಕಾರ್ಜುನ ಮೂಲಗಿ,  ಸಂಜುಕುಮಾರ ಕೋಳಿ, ಗುಂಡಪ್ಪ ಬುಧೇರಾ, ಭೀಮರೆಡ್ಡಿ, ರಾಜ ರೆಡ್ಡಿ, ದೀಪಕ ಕುಲಕರ್ಣಿ, ಪರಮೇಶ ಪಾಟೀಲ, ಬಕ್ಕಪ್ಪ, ಮನ್ನಳ್ಳಿ ರೈತ ಸಂಪರ್ಕ ಕೇಂದ್ರ ಅಧಿಕಾರಿ, ವಿಜಯಕುಮಾರ, ಬಗದಲ ರೈತ ಸಂಪರ್ಕ ಕೇಂದ್ರ ಅಧಿಕಾರಿ ಅಂಬುಜಾ, ಕಮಠಾಣಾ ರೈತ ಸಂಪರ್ಕ ಕೇಂದ್ರ ಅಧಿಕಾರಿ ಸೌಮ್ಯ, ಚಿಟ್ಟಾ ರೈತ ಸಂಪರ್ಕ ಕೇಂದ್ರ ಅಧಿಕಾರಿ ಗೀರಿಶ, ಬೀದರ್ ತಾಂತ್ರಿಕ ಕೃಷಿ ವ್ಯವಸ್ಥಾಪಕರಾದ  ಸತೀಶ ಕುಮಾರ ಶೇಟಕಾರ, ಅರುಣಕುಮಾರ ಮತ್ತಿತರರು ಉಪಸ್ಥಿತರಿದ್ದರು.