ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿಷ್ಯವೇತನ ವಿತರಣೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿಷ್ಯವೇತನ ವಿತರಣೆ  Distribution of scholarships by Shri Kshetra Dharmasthala Rural Development Project

ಲೋಕದರ್ಶನ ವರದಿ 

ಗದಗ  28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳಲ್ಲಿ ಒಂದಾದ ಸುಜ್ಞಾನವಿಧಿ ಶಿಷ್ಯವೇತನ ಯೋಜನೆಯ ಅರ್ಹ ಸದಸ್ಯರ ಕುಟುಂಬದ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ರಂಗಕ್ಕೆ ನೆರವಾಗುವಲ್ಲಿ ಯಶಸ್ವಿಯಾಗಿದ್ದು ಇದುವರೆಗೂ ರಾಜ್ಯಾದ್ಯಂತ 1,37,165 ವಿದ್ಯಾರ್ಥಿಗಳಿಗೆ 186 ಕೋ. ರೂ. ಶಿಷ್ಯವೇತನವನ್ನು ವಿತರಿಸಲಾಗಿದ್ದು ಗದಗ ಜಿಲ್ಲೆಯಲ್ಲಿ ಈವರೆಗೆ 946 ವಿದ್ಯಾರ್ಥಿಗಳಿಗೆ 10 ಕೋ.ರೂ. ಶಿಷ್ಯವೇತನ ವಿತರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದಗ ತಾಲೂಕು ಯೋಜನಾಧಿಕಾರಿ ಶ್ರೀಮತಿ ಉಮಾ ಅವರು ಹೇಳಿದರು. 

 ನಗರದ ಜಿಲ್ಲಾ ಕಛೇರಿಯಲ್ಲಿ  ಅವರು 2025-26 ನೇ ಸಾಲಿನಲ್ಲಿ ಆಯ್ಕೆಯಾದ 40 ವಿದ್ಯಾರ್ಥಿನಿಯರಿಗೆ  ಶಿಷ್ಯವೇತನದ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡ ಮಾಡಿದ ಶಿಷ್ಯವೇತನವನ್ನು ವಿದ್ಯಾರ್ಥಿನಿಯರು ಭವಿಷ್ಯದ ನಿಧಿ ಎಂದು ಪರಿಗಣಿಸಿ ಇದನ್ನು ಸದುಪಯೋಗ ಪಡೆಸಿಕೊಂಡು, ಉತ್ತಮ ಶಿಕ್ಷಣ ಪಡೆದು ಕುಟುಂಬಕ್ಕೆ ಮತ್ತು  ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹಾರೈಸಿದರು. 

 ರೈತ ಸಂಘದ ಅಧ್ಯಕ್ಷರಾದ ಪರಮೇಶಪ್ಪ  ಜಂತ್ಲಿ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ಆದ  ವಿಶೇಷ ಕೊಡುಗೆ ನೀಡಿದೆ. ಈ ಸಂಸ್ಥೆಯು  ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ, ಮದ್ಯವ್ಯಸನಿಗಳಿಗೆ, ರೈತರಿಗೆ ಹಾಗೂ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಯಶಸ್ವಿಗೊಳಿಸುವ ಮೂಲಕ ಧರ್ಮಸ್ಥಳ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ವೀರೇಂದ್ರ ಹೆಗ್ಗಡೆಯವರ ಕನಸನ್ನು ನನಸನ್ನಾಗಿ ಮಾಡಿದ ಈ ಸಂಸ್ಥೆಯಿಂದ ಇನ್ನಷ್ಟು ಯೋಜನೆಗಳು ಜಾರಿಗೆ ಬಂದು ಸದೃಢ ಸಮಾಜಕ್ಕೆ ಭದ್ರಬುನಾದಿಯಾಗಲಿ ಎಂದು ಹೇಳಿದರು. 

ವಿಬಿಐ ನ್ಯೂಸ್‌ನ ಸಂಪಾದಕರು  ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ವೆಂಕಟೇಶ ಇಮರಾಪೂರ ಅವರು ಮಾತನಾಡಿ, ಮಹಿಳೆಯರಿಗೆ ಹಣಕಾಸಿನ ಶಿಸ್ತನ್ನು ಕಲಿಸಿ  ಅವರನ್ನು ಸ್ವಾವಲಂಬಿ ಬದುಕಿಗೆ ಈ ಸಂಸ್ಥೆಯು ದಾರಿ ಮಾಡಿಕೊಟ್ಟಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಮಹತ್ವದ ಯೋಜನೆಗಳಿಂದ  ಇಂದಿನ ಸಾಕಷ್ಟು ಜನರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.

ಸರಕಾರ ಮಾಡದ ಯೋಜನೆಗಳನ್ನು ಈ ಸಂಸ್ಥೆಯು ಮಾಡಿ ನಾಡಿನ ಜನರ ಮನದಲ್ಲಿ ಮನೆ ಮಾಡಿದೆ. ಸಂಸ್ಥೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಎಲ್ಲರೂ ಮುಂದೆ ಬರಬೇಕು. ವಿದ್ಯಾರ್ಥಿಗಳಿಗೆ ಶಿಷ್ಯವೇತನ ಶ್ರೀ ಕ್ಷೇತ್ರದ ಪುಣ್ಯಪ್ರಸಾದದಂತಿದೆ ಈ ಶಿಷ್ಯವೇತನನ್ನು ಸದ್ವಿನಿಯೋಗ ಮಾಡಿಕೊಂಡು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಹೇಳಿದರು.