ಇ-ಸ್ವತ್ತು ಅರ್ಜಿ ಸ್ವೀಕರಿಸಲು ಗ್ರಾಮ ಒನ್ ಕೇಂದ್ರಗಳಿಗೆ ನಿರ್ದೇಶನ

ಇ-ಸ್ವತ್ತು ಅರ್ಜಿ ಸ್ವೀಕರಿಸಲು ಗ್ರಾಮ ಒನ್ ಕೇಂದ್ರಗಳಿಗೆ ನಿರ್ದೇಶನ Directions to Gram One centers to accept e-asset applications

ಲೋಕದರ್ಶನ ವರದಿ 

ಇ-ಸ್ವತ್ತು ಅರ್ಜಿ ಸ್ವೀಕರಿಸಲು ಗ್ರಾಮ ಒನ್ ಕೇಂದ್ರಗಳಿಗೆ ನಿರ್ದೇಶನ 

ಹಾನಗಲ್ 04: ಇ-ಸ್ವತ್ತು ಅರ್ಜಿ ಸ್ವೀಕರಿಸಲು ಈಗಾಗಲೇ ನಗರದ ಎಲ್ಲ ಗ್ರಾಮ ಒನ್ ಕೇಂದ್ರಗಳಿಗೆ ನಿರ್ದೇಶಿಸಲಾಗಿದೆ. ಸದ್ಯ ಅಲ್ಲಿ ಇ-ಸ್ವತ್ತು ಅರ್ಜಿ ಸ್ವೀಕರಿಸಲಾಗುತ್ತಿದ್ದು ಪ್ರತಿ ತಿಂಗಳು ಕನಿಷ್ಟ 800 ರಿಂದ 1000 ಅರ್ಜಿ ಸ್ವೀಕರಿಸಿ ಇತ್ಯರ್ಥ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಶಾಸಕ ಶ್ರೀನಿವಾಸ ಮಾನೆ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. 


  ಇಲ್ಲಿ ಪುರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಇಂದಿಗೂ ಸಹ ನಗರ ವ್ಯಾಪ್ತಿಯ ಸಾಕಷ್ಟು ಸ್ವತ್ತುಗಳನ್ನು ಇ-ಸ್ವತ್ತಿಗೆ ಒಳಪಡಿಸುವುದು ಬಾಕಿ ಉಳಿದಿದೆ. ಒಂದು ಬಾರಿಗೆ ಕಡ್ಡಾಯವಾಗಿ ಎಲ್ಲ ಸ್ವತ್ತುಗಳನ್ನೂ ಸಹ ಇ-ಸ್ವತ್ತಿಗೆ ಅಳವಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇ-ಸ್ವತ್ತು ಪ್ರಕ್ರಿಯೆಯಲ್ಲಿ ಒಳಪಡುವ ಯಾವುದೇ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ವೀಕರಿಸಿದ ಅರ್ಜಿಗಳ ವಿಳಂಬಕ್ಕೆ ಅವಕಾಶ ನೀಡದೇ ಸಕಾಲಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುತುವರ್ಜಿ ವಹಿಸಿ ಎಂದರು.ಕೆಲ ವಾರ್ಡುಗಳಲ್ಲಿ ಮಳೆಯಿಂದ ಅಲ್ಲಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ. ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಶಾಸಕ ಮಾನೆ ಸೂಚಿಸಿದರು. 

       ಮುಖ್ಯಮಂತ್ರಿ ವಿಶೇಷ ಅನುದಾನದಡಿ ಅನುದಾನ ದೊರಕಿಸಲು ವಾರ್ಡುಗಳಲ್ಲಿ ಅವಶ್ಯಕ ಕಾಮಗಾರಿಗಳ ಪಟ್ಟಿ ತಯಾರಿಸಿಕೊಂಡು ಆದ್ಯತೆ ಮೇರೆ ಕಾಮಗಾರಿ ಕೈಗೊಳ್ಳಲು ಸೂಕ್ತ ಕ್ರಮ ವಹಿಸಿ. ನಿತ್ಯದ ಕೆಲಸ, ಕಾರ್ಯಗಳಿಗೆ ಪುರಸಭೆಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೆಲಸಗಳನ್ನು ನಿಗದಿತ ಕಾಲಮಿತಿಯಲ್ಲಿ ಮಾಡಿಕೊಡುವಂತೆ ಶ್ರೀನಿವಾಸ ಮಾನೆ ಸೂಚಿಸಿದರು.ಮುಖ್ಯಾಧಿಕಾರಿ ಜಗದೀಶ್ ವೈ.ಕೆ.ಅಭಿಯಂತರ ನಾಗರಾಜ ಮಿರ್ಜಿ ಇದ್ದರು.