ಯಶಸ್ವಿ ಕನ್ನಡ ಚಳುವಳಿಗಳಿಗೆ ಮೂಲ ಧಾರವಾಡದ ಪರಿಸರ; ಡಾ. ಕಂಟನಕುಂಟೆ

ಯಶಸ್ವಿ ಕನ್ನಡ ಚಳುವಳಿಗಳಿಗೆ ಮೂಲ ಧಾರವಾಡದ ಪರಿಸರ; ಡಾ. ಕಂಟನಕುಂಟೆ  Dharwad environment is the source of successful Kannada movements said Dr. Kantanakunte

ಲೋಕದರ್ಶನ ವರದಿ 

ಧಾರವಾಡ 28: ಕನ್ನಡ ನಾಡು, ನುಡಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಚಳುವಳಿಗಳು ಅಂಕುರಗೊಂಡು, ಮೊಳಕೆಯೊಡೆದು ಹೆಮ್ಮರವಾಗಲು ಕಾರಣ ಧಾರವಾಡದ ಪರಿಸರ. ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸುವ ಕರ್ನಾಟಕ ಏಕೀಕರಣ ಚಳುವಳಿಯು ಆರಂಭವಾಗಿದ್ದು ಧಾರವಾಡದಿಂದ ಎಂದು ಹುಬ್ಬಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ರಂಗನಾಥ ಕಂಟನಕುಂಟೆ ಹೇಳಿದರು.  

ಅವರು ಧಾರವಾಡದ ಸಾಹಿತ್ಯ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಮತ್ತು ಗಣಕರಂಗ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ; ಧಾರವಾಡ ಪರಿಸರ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿ ಏಕೀಕರಣದ ನಂತರ ಕರ್ನಾಟಕವೆಂದು ನಾಮಕರಣಗೊಳ್ಳಲು ಸಹ ಆರಂಭಗೊಂಡ ಹೋರಾಟ ರಾಜ್ಯವ್ಯಾಪಿ ವಿಸ್ತರಣೆಗೊಂಡು ಯಶಸ್ವಿಯಾಗಿದ್ದು ಈಗ ಇತಿಹಾಸ. ಇಂದಿಗೂ ನೆಲ-ಜಲದ ವಿಷಯ ಬಂದಾಗ ಧಾರವಾಡ ಪರಿಸರದಿಂದ ಮೊಳಕೆಯೊಡೆಯುವ ಹೋರಾಟಗಳು ಎಲ್ಲವೂ ಯಶಸ್ವಿಯಾಗಿವೆ. ಹೀಗಾಗಿ ಧಾರವಾಡದಿಂದ ಆರಂಭವಾಗುವ ಚಳುವಳ ಕುರಿತು ಹೆಚ್ಚಿನ ಭರವಶೆಯಿರುತ್ತದೆ ಎಂದು ಅಭಿಪ್ರಾಯಪಟ್ಟರು.  

ಗಣಕರಂಗದ ಸಂಸ್ಥೆಯ ಮುಖ್ಯಸ್ಥ ಮತ್ತು ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕ ಸಿದ್ಧರಾಮ ಹಿಪ್ಪರಗಿಯವರು ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಕರ್ನಾಟಕ ಎಂದು ನಮ್ಮ ರಾಜ್ಯಕ್ಕೆ ನಾಮಕರಣವಾಗುವುದಕ್ಕಿಂತ ಹಲವಾರು ದಶಕಗಳ ಮೊದಲು ಧಾರವಾಡದ ಪರಿಸರದಲ್ಲಿ ಕರ್ನಾಟಕ ಹೆಸರಿನ ಹಲವಾರು ಸಂಘ-ಸಂಸ್ಥೆಗಳು, ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯ, ವೃತ್ತ, ಹೊಟೆಲು, ಅಂಗಡಿ-ಮುಂಗಟ್ಟುಗಳಿದ್ದವು ಎಂಬುದನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು ಮತ್ತು ಹಿರಿಯ ಪ್ರಾಧ್ಯಾಪಕ ಡಾ.ಅರ್ಜುನ ಗೊಳಸಂಗಿಯವರು ಮಾತನಾಡುತ್ತಾ, ಏಕೀಕರಣಗೊಂಡ ಕರ್ನಾಟಕ, ನಾಮಾಂಕಿತಗೊಂಡ ಕರ್ನಾಟಕ, ಸಮಕಾಲೀನ ಕರ್ನಾಟಕ ಮುಂತಾದ ಸಂಗತಿಗಳನ್ನು ಗಮನಿಸಿದಾಗ 70ರ ಸಂಭ್ರಮದ ರಾಜ್ಯೋತ್ಸವದ ಆಚರಣೆ ಒಂದೇಡೆಯಾದರೆ, ಕನ್ನಡ ಶಾಲೆಗಳನ್ನು ವಿವಿಧ ಕಾರಣಗಳನ್ನು, ಸಬೂಬುಗಳನ್ನು ಹೇಳುತ್ತಾ ಮುಚ್ಚುತ್ತಿರುವುದು ಬೇಸರದ ಸಂಗತಿಯಾಗಿದೆ. ಉರ್ದು, ಮರಾಠಿ, ತೆಲುಗು ಭಾಷೆಯ ಶಾಲೆಗಳು ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಆರಂಭಿಸಲಾಗುತ್ತಿದೆ. ಅದರಂತೆ ಕನ್ನಡ ಶಾಲೆಗಳನ್ನು ಪಕ್ಕದ ರಾಜ್ಯದ ಮದ್ಯಭಾಗ ಬಿಡಿ, ಗಡಿಭಾಗದಲ್ಲಿ ಆರಂಭಿಸಲು ಸಾಧ್ಯವೇ ಇಲ್ಲದಷ್ಟು ಅಲ್ಲಿನ ಮಾತೃಭಾಷಾಭಿಮಾನದ ವಾತಾವರಣ ತೀವ್ರವಾಗಿದೆ. ಆದರೆ ನಮ್ಮ ಕನ್ನಡಿಗರ ಮಾತೃಭಾಷಾಭಿಮಾನ ಎಷ್ಟೊಂದು ಉದಾಸೀನತೆ, ಜವಾಬ್ದಾರಿಯಿಲ್ಲದಂತಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಆಳುವ ಸರಕಾರವನ್ನು ಜವಾಬ್ದಾರಿ ಮಾಡುವುದನ್ನು ಬಿಟ್ಟು ವಿಶ್ವದಾದ್ಯಂತ ಚದುರಿ ಹೋಗಿರುವ ಕನ್ನಡಿಗರು ತಮ್ಮ ಜವಾಬ್ದಾರಿಯೊಂದಿಗೆ ಎಚ್ಚರಗೊಳ್ಳುವುದು ಅವಶ್ಯಕವಾಗಿದೆ ಎಂದು ನುಡಿದರು.  

ನಂತರ ನಡೆದ ಕವಿಗೋಷ್ಠಿಯಲ್ಲಿ ನಾಡು-ನುಡಿಯ ಕುರಿತು ಕವನ ವಾಚಿಸಿದ ಸುಮಾರು ಮೂವ್ವತ್ತಕ್ಕಿಂತ ಹೆಚ್ಚು ಕವಿಗಳಿಗೆ ಪುಸ್ತಕ ಮತ್ತು ಪ್ರಮಾಣಪತ್ರಗಳನ್ನು ಗೌರವಪೂರ್ವಕವಾಗಿ ನೀಡಲಾಯಿತು. ಕವಿ ಶಿವಪ್ಪ ಕರಡಿಯವರು ನಾಡಗೀತೆ ಮತ್ತು ಪ್ರಾರ್ಥನೆ ನೆರವೇರಿಸಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕ ಎಂ.ಮಂಜುನಾಥ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.