ಸಂಗೀತದಿಂದ ಧಾರವಾಡದ ಕೀರ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದೆ: ತರ್ಲಗಟ್ಟಿ

ಧಾರವಾಡ 30: ಧಾರವಾಡ ಪ್ರಾಥಃಸ್ಮರಣೀಯ ಸಂಗೀತಗಾರರ ತವರೂರು. ಧಾರವಾಡದ ಕೀರ್ತಿಯನ್ನು ಪ್ರಪಂಚದ ಉದ್ದಗಲ ಪಸರಿಸಿದ ಸಂಗೀತ ಪರಂಪರೆಯೇ ಇಲ್ಲಿದೆ, ಹಲವಾರು ದಿಗ್ಗಜರು ಈ ನೆಲದಲ್ಲಿ ತಮ್ಮ ಸಂಗೀತ ಕಛೇರಿಯನ್ನು ನೀಡಿ ಉತ್ತುಂಗಕ್ಕೆ ಬೆಳೆದಿದ್ದು ಧಾರವಾಡದ ಹೆಸರು ರಾಷ್ಟ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಗುರುತಿಸುವಂತಾಗಿದೆ ಅಲ್ಲದೆ ಯುವಕರು ಇಂದು ಬೆಳೆಯಬೇಕಾಗಿದೆ ಸಂಗೀತದಲ್ಲಿ ಅಭೂತಪೂರ್ವ ಶಕ್ತಿ ಇದೆ ಸತತ ರಿಯಾಜ್ ಮೂಲಕ ಅದನ್ನು ಬೆಳೆಸಿಕೊಂಡಲ್ಲಿ ಸಾಧನೆ ಕಟ್ಟಿಟ್ಟ ಬುತ್ತಿ ಎಂದು ಧಾರವಾಡ ಕ.ವಿ.ವಿ ಲಲಿತಕಲಾ ಮತ್ತು ಸಂಗೀತ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ತರ್ಲಗಟ್ಟಿ ಹೇಳಿದರು.

ಅವರು ಅಭಿಜ್ಞಾ ಸಂಗೀತ ಅಕ್ಯಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಆಲೂರು ವೆಂಕಟರಾವ ಸಂಭಾಗಣದಲ್ಲಿ ಏರ್ಪಡಿಸಿದ್ದ 'ಋತುರಾಗ ಸಂಧ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಉಪನ್ಯಾಸಕರಾಗಿ ಡಾ.ಶಾಂತಾರಾಮ ಹೆಗಡೆಯವರು' ಹಿಂದೂಸ್ಥಾನಿ ಸಂಗೀತದಲ್ಲಿ ಋತುರಾಗ ಕುರಿತಾಗಿ ಮಾತನಾಡುತ್ತಾ ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ  ರಾಗಗಳಿಗೆ ಸಮಯ ವರ್ಗಿಕರಣ ಮಾಡಲಾಗಿದೆ. ಸಮಯ ಸಿದ್ದಾಂತ, ಋತುಸಿದ್ದಾಂತಕ್ಕೆ  ಪ್ರಾಚೀನತೆಯಿದೆ, ವೇದಕಾಲದಲ್ಲಿ ಸಾಮದ ಆರಾದಧನೆಯನ್ನು ಋತುಗಳಿಗನುಸಾರವಾಗಿ ಮಾಡುತ್ತಿದ್ದರು. ಋತುಗಳ ಪ್ರಭಾವ ಸಂಗೀತ, ಸಾಹಿತ್ಯ, ಚಿತ್ರಗಳ ಮೇಲೆ ಬಹುವಾಗಿದೆ ಎಂದರು.

ಪಂಡಿತ ಗಣಿಪತಿಭಟ್ ಹಾಸಣಗಿಯವರು ಮೇಘರಾಗ, ಶ್ರೀರಾಗ, ಮಾಲಕಂಸ ರಾಗಗಳನ್ನು ಪ್ರಸತುತ ಪಡಿಸಿ ಕೇಳುಗರನ್ನು ಮಂತ್ರಮುಗ್ದಗೊಳಿಸಿದರು. ಮಳೆಮಲ್ಲೂರ ಹೂಗಾರ ತಬಲಾ ಸಾಥ ನೀಡಿದರು.

ಚೈತ್ರಾ ಭಾಗವತ್ ಹಾಗೂ ಸುರಭಿ ಕುಲಕರ್ಣಿ ಇವರು ಹಾಡಿ ಡಾ. ಶಕ್ತಿ ಪಾಟೀಲ ರಾಗ ಸಂಯೋಜಿಸಿದ ಭಜನ್ ಸ್ಮರಣ ಎಂಬ ಭಕ್ತಿಗೀತೆಗಳ (ಹಿಂದಿ) ಸಿಡಿಯನ್ನು ಬಿಡುಗಡೆ ಮಾಡಲಾಯಿತು.  

 ಅರ್ಚನಾ ಪತ್ತಾರ ಹಾಗೂ ಅಕ್ಷತಾ ಬಿರಾದಾರ ಪ್ರಾರ್ಥಿಸಿದರು. ಭಾಗೀರಥಿ ಕಲಕಾಂಬಕರ ಸ್ವಾಗತ ಪರಿಚಯ ಮಾಡಿದರು. ಆರತಿ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಡಾ.ಸುಜಾತಾ ಕೊಂಬಳಿ ನಿರೂಪಿಸಿದರು. ಸುಮಾರು ನೂರಕ್ಕೂ ಹೆಚ್ಚು ಸಂಗೀತಾಸಕ್ತರು ಸಂಗೀತ ಲಹರಿಯ ಋತುರಾಗ ಸಂಧ್ಯಾ ವನ್ನು ಆಸ್ವಾದಿಸಿದರು.