ಧರ್ಮಸ್ಥಳ ಸಂಸ್ಥೆಯಿಂದ 160 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಪ್ರಮಾಣ ಪತ್ರ ವಿತರಣೆ..!

ಧರ್ಮಸ್ಥಳ ಸಂಸ್ಥೆಯಿಂದ 160 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಪ್ರಮಾಣ ಪತ್ರ ವಿತರಣೆ..! Dharmasthala Institute distributes Sugyan Nidhi scholarship certificates to 160 students..!

ಕಾಗವಾಡ  25: ವೀರೇಂದ್ರ ಹೆಗಡೆ ಅವರು ಧರ್ಮಸ್ಥಳ ಸಂಸ್ಥೆಯ ಮೂಲಕ ಕೈಗೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳಿಂದ ಕಡು ಬಡ ಕುಟುಂಬಗಳು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿವೆ ಎಂದು ಮುಖಂಡ ಶೀತಲಗೌಡ ಪಾಟೀಲ ಹೇಳಿದ್ದಾರೆ. 

ಅವರು, ಬುಧವಾರ ದಿ. 24 ರಂದು ಪಟ್ಟಣದ ಆಚಾರ್ಯ ವಿಧ್ಯಾಸಾಗರ ಶಾಲೆಯ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಂಜೂರಾದ ಸುಜ್ಞಾನನಿಧಿ ಶಿಷ್ಯ ವೇತನ ಪ್ರಮಾಣ ಪತ್ರ ವಿತರಿಸಿ, ಮಾತನಾಡುತ್ತಿದ್ದರು. ಧರ್ಮಸ್ಥಳ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಾವಿರಾರು ಜನರ ಜೀವನಕ್ಕೆ ದಾರಿ ದೀಪವಾಗಿದೆ. ಅದರಂತೆ ರಾಜ್ಯದ ಬಡ ಕುಟುಂಬದ ಮಕ್ಕಳೂ ಸಹ ಉನ್ನತ ಶಿಕ್ಷಣ ಪಡೆಯಬೇಕೆನ್ನುವ ದೃಷ್ಟಿಕೋನದಿಂದ ಪ್ರತಿವರ್ಷ ಸಾವಿರಾರು ಕೋಟಿ ಶಿಷ್ಯ ವೇತನವನ್ನು ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದೆ. ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಹೇಳಿದರು. 

ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ ಮಾತನಾಡಿ, ಕಾಗವಾಡ ತಾಲೂಕಿನ ಸುಮಾರು 160 ವಿದ್ಯಾರ್ಥಿಗಳಿಗೆ 75 ಲಕ್ಷ ಮೊತ್ತದ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರವನ್ನು ಸಂಸ್ಥೆಯಿಂದ ನೀಡಲಾಗಿದೆ. ಈ ಶಿಷ್ಯ ವೇತನ ಪಡೆದುಕೊಳ್ಳುವ ಮಕ್ಕಳು, ತಮ್ಮ ಶಿಕ್ಷಣಕ್ಕೆ ಪೂರಕವಾಗಿ ಹಣವನ್ನು ಬಳಸಿಕೊಂಡು, ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಹೇಳಿದರು. 

ಈ ವೇಳೆ ಉಪತಹಶಿಲ್ದಾರ ರಶ್ಮಿ ಜಕಾತಿ, ಬಿಇಓ ಪಿ.ಬಿ. ಮದಭಾವಿ, ಮುಖಂಡರಾದ ಸ್ವಪ್ನೀಲ ಪಾಟೀಲ, ಅರುಣ ಗಾಣಿಗೇರ, ಭಮಣ್ಣಾ ಚೌಗುಲೆ, ನಾಥಗೌಡ ಪಾಟೀಲ, ಪದ್ಮಾಕರ ಕರವ, ಖಂಡೇರಾವ ಗೋರೆ​‍್ಡ, ವಿಠ್ಠಲ ಹಳ್ಳೊಳ್ಳಿ, ಯೋಜನಾದಿಕಾರಿ ಸಂಜೀವ ಮರಾಠಿ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಮತ್ತು ಅನೇಕರು ಉಪಸ್ಥಿತರಿದ್ದರು.