ಬೆಂಗಳೂರು, ನ.12 : ವ್ಯಕ್ತಿಯೋರ್ವನಿಗೆ ಕರೆ ಮಾಡಿ ಧಮ್ಕಿ ಹಾಕಿದ ಬಳಿಕ 4 ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಬಾಗಲ್ ಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಟಿ. ಶ್ರೀನಿವಾಸ್ ಎಂಬುವವರಿಗೆ ಸೇರಿದ ವಾಹನಗಳು ಇವಾಗಿದ್ದು, ಕೃತ್ಯ ಎಸಗುವ ಮೊದಲು ಕಿಡಿಗೇಡಿಗಳು, ಶ್ರೀನಿವಾಸ್ ಅವರಿಗೆ ಕರೆ ಮಾಡಿ 50 ಲಕ್ಷ ರೂ ಹಣ ನೀಡಬೇಕು, ಇಲ್ಲದಿದ್ದರೇ ವಾಹನಗಳಿಗೆ ಬೆಂಕಿ ಹಚ್ಚುವುದಾಗಿ ಧಮ್ಕಿ ಹಾಕಿದ್ದರು ಎಂದು ತಿಳಿದು ಬಂದಿದೆ. ಆದರೆ, ಹಣ ನೀಡುವುದಕ್ಕೆ ಬಿ.ಟಿ. ಶ್ರೀನಿವಾಸ್ ಅವರು ಒಪ್ಪದಿದ್ದಕ್ಕೆ ಆಕ್ರೋಶಗೊಂಡ ಕಿಡಿಗೇಡಿಗಳು ಪೆಟ್ರೋಲ್ ಸುರಿದು ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿ, ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.