ಮುನಿಗಳ ದರ್ಶನಕ್ಕೆ ವಿವಿಧ ಜಿಲ್ಲೆಗಳಿಂದ ಶ್ರಾವಕ-ಶ್ರಾವಕಿಯರ ಆಗಮನ

ಮುನಿಗಳ ದರ್ಶನಕ್ಕೆ ವಿವಿಧ ಜಿಲ್ಲೆಗಳಿಂದ ಶ್ರಾವಕ-ಶ್ರಾವಕಿಯರ ಆಗಮನ Devotees from various districts arrive to see the sages

ಹಾವೇರಿ ನಗರದಲ್ಲಿ ಮುನಿಶ್ರೀ ವಿದಿತಸಾಗರ ಮಹಾರಾಜರ ಸಾನಿಧ್ಯದಲ್ಲಿ ಚಾತುರ್ಮಾಸ  

ಹಾವೇರಿ: ಹಾವೇರಿ ನಗರದ ಜಿನ ಮಂದಿರದಲ್ಲಿ ಬಹಳ ವರ್ಷಗಳ ನಂತರ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗಾರ ಮಹಾರಾಜರ ಸಾನಿಧ್ಯದಲ್ಲಿ ಚಾತುರ್ಮಾಸ ಆಚರಣೆ ಮಾಡಲಾಗುತ್ತಿದೆ. ಮುನಿಗಳ ಸಾನಿಧ್ಯದಲ್ಲಿ ಪ್ರತಿನಿತ್ಯ ವಿವಿಧ ಪೂಜಾ ಕಾರ್ಯಗಳು ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಬೆಂಗಳೂರು, ಹಾಸನ, ಶಿವಮೊಗ್ಗ, ಬೆಳಗಾವಿ, ದಾವಣಗೆರೆ ಸೇರಿದಂತೆ  ವಿವಿಧ ಜಿಲ್ಲೆಗಳ ಶ್ರಾವಕ ಮತ್ತು ಶ್ರಾವಕಿಯರು  ಮುನಿಶ್ರೀ ವಿದಿತಸಾಗಾರ ಮಹಾರಾಜರ ದರ್ಶನಕ್ಕೆ ತಂಡೋಪತಂಡವಾಗಿ ಹಾವೇರಿ ನಗರಕ್ಕೆ ಆಗಮಿಸುತ್ತಿದ್ದಾರೆ. 

ಮುನಿಗಳ ದರ್ಶನಕ್ಕೆ ಆಗಮಿಸುವವರಿಗೆ ಶುದ್ಧ ಆಹಾರ, ವಸತಿ  ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಹಾಗೂ ಭಗವಂತರ ಅಭಿಷೇಕಮಾಡಲು ಸಹ ಅವಕಾಶ ಕಲ್ಪಿಸಲಾಗುತ್ತಿದೆ.   

ಗುರುಪಾಸ್ತಿ, ಸ್ವಾಧ್ಯಾಯ, ಸಂಯಮ, ತಪ ಮತ್ತು ದಾನ ಇವುಗಳು ಗೃಹಸ್ಥರ ಷಟ್ ಕ್ರಿಯೆಗಳಾಗಿವೆ. ಈ ಷಟ್ ಕ್ರಿಯೆಗಳಲ್ಲಿ ದೇವಪೂಜೆ ಮೊದಲನೆಯದು, ವೀತರಾಗ ಭಗವಂತರ ಪೂಜೆಯನ್ನು ಶ್ರವಾಕರು ಸ್ವತಃ ಪ್ರತಿದಿನ ಮಾಡಬೇಕು.  ಈ ಎಲ್ಲ ವಿಷಯಗಳ ಬಗ್ಗೆ ಮುನಿಗಳು ಅತ್ಯಂತ ಮನಮುಟ್ಟುವಂತೆ  ತಿಳಿಸುತ್ತಿದ್ದಾರೆ. ಪ್ರತಿಯೊಬ್ಬರೂ ಪ್ರತಿದಿನ ಜಿನಮಂದಿರಕ್ಕೆ ಆಗಮಿಸಬೇಕು  ಹಾಗೂ ಶ್ರಾವಕರು ಭಗವಂತರ ಅಭಿಷೇಕ ಮಾಡಬೇಕು ಎಂದು ತಿಳುವಳಿಕೆ ನೀಡುತ್ತಿದ್ದಾರೆ.  

ಪೂಜೆ ಕ್ರಮ,  ಪೂಜೆಗೆ ಯಾವ ವಸ್ತ್ರ ಹಾಗೂ ಮುನಿಗಳಿಗೆ ಆಹಾರ ಕೊಡುವಾಗ ಯಾವ ವಸ್ತ್ರ ಧರಿಸಬೇಕು ಎಂದು ಉಪದೇಶ  ನೀಡುತ್ತಿದ್ದಾರೆ.   ಪೂಜೆಗೆ ಆಗಮಿಸುವ ಶ್ರಾವಕರು ಹಾಗೂ ಸಣ್ಣ ಮಕ್ಕಳ ಧೋತಿ ದುಪಟ್ಟವನ್ನು  ಮುನಿಗಳೇ ನಗುಮುಖದಿಂದ ಸರಿಮಾಡುತ್ತಾರೆ. ಒಟ್ಟಾರೆ ಮುನಿಗಳು ಮಕ್ಕಳಿಂದ ಹಿಡಿದು ವಯೋವೃದ್ಧವರೆಗೆ ಎಲ್ಲರಿಗೂ  ಧರ್ಮದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇದರಿಂದ ಧರ್ಮಪ್ರಭಾನೆಯಾಗುತ್ತಿದೆ.  

ಜಿನ ಭಗವಂತರಿಗೆ ಅಭಿಷೇಕ:  ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗಾರ ಮಹಾರಾಜರ ಸಾನಿಧ್ಯದಲ್ಲಿ ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಜಿನಭಗವಂತರಿಗೆ ಅಭಿಷೇಧಕ, ಶಾಂತಿಧಾರೆ ಸೇರಿದಂತೆ ವಿವಿಧ ಪೂಜಾ ವಿಧಾನಗಳು ನಡೆಯುತ್ತವೆ. ಎಲ್ಲ ಶ್ರಾವಕರು  ಭಗವಂತರಿಗೆ ಅಭಿಷೇಕ ಮಾಡುತ್ತಾರೆ. ಮಹಾರಾಜರು ಸಮಯಕ್ಕೆ ಬಹಳ ಮಹತ್ವ ನೀಡುವ ಹಿನ್ನಲೆಯಲ್ಲಿ ನಿಗದಿತ ಸಮಯಕ್ಕೆ ಎಲ್ಲ ಕಾರ್ಯಕ್ರಮಗಳು ನಡೆಸುವಂತೆ ಆಯೋಜಕರಿಗೆ ಸಲಹೆ ನೀಡಿರುವುದರಿಂದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಅಚ್ಚುಕಟ್ಟಾಗಿ ನೇರಿಸಲಾಗುತ್ತಿದೆ.  

 ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರ:   ನಗರದ ಜಿನ ಮಂದಿರದಲ್ಲಿ ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರ ದಿನಾಂಕ 22-09-2025 ರಿಂದ 29-09-2025 ರವರೆಗೆ  ಆಯೋಜಿಸಲಾಗಿದೆ. ಮುನಿಶ್ರೀ 108 ವಿದಿತಸಾಗರ ಮಹಾರಾಜರ ಪ್ರೇರಣೆ ಮತ್ತು ಪರಮ ಪಾವನ ಸಾನಿಧ್ಯದಲ್ಲಿ ಹಾಗೂ ಪ್ರತಿಮಾಧಾರಿಗಳಾದ ಸಿದ್ಧಗೌಡ ಪಾಟೀಲ, ಹಾರೋಗೇರಿ, ಬ್ರ.ಸಾಧನ ದೀದಿ, ಪರಿಮಳ ಮೋಹನ, ಬೆಳ್ಳೂರು, ಜಯಕುಮಾರ ಬಯ್ಯಾಜಿ, ಮಹಾವೀರ ಬಯ್ಯಾಜಿ ಅವರ ನೇತೃತ್ವದಲ್ಲಿ  ಜೈನ ಧರ್ಮದ ತತ್ವಗಳನ್ನು ಶ್ರಾವಕರ ಆಚಾರ, ವಿಚಾರಗಳ ಸಂಸ್ಕಾರ, ಜ್ಞಾನ, ಪೂಜೆ, ಶ್ರಾವಕ-ಶ್ರಾವಕಿ ಸಂಸ್ಕಾರಾದಿ ಕಾರ್ಯಕ್ರಮಗಳನ್ನು  ಮಕ್ಕಳದಿಂದ  ಹಿಡಿದು ಎಲ್ಲ ವಯೋಮಾನದವರಿಗೆ ನೀಡಲಾಗುತ್ತಿದೆ. 135ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದು, ಜಿನಧರ್ಮದ ಜ್ಞಾನವನ್ನು ತುಂಬಾ ಉತ್ಸಾಹದಿಂದ ಪಡೆದುಕೊಳ್ಳುತ್ತಿದ್ದಾರೆ. 

ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ  ಶಿಬಿರಾರ್ಥಿಗಳಿಗೆ ಪೂಜಾ ಪಾತ್ರೆ, ಸಮವಸ್ತ್ರ ಬಿಳಿ ಕಾಟನ್ ಸೀರೆ ಮತ್ತು ಧೋತಿ ದುಪ್ಪಟ್ಟ, ಕೀರೀಟ, ಪಂಚರಂಗಿ ಶಲ್ಯ, ಜಿನವಾಣಿ ಪುಸ್ತಕ, ನೋಟ್‌ಬುಕ್, ಪೆನ್ನು, ಶುದ್ಧ ಭೋಜನ, ಉಪಹಾರ, ಲಘು ಪಾನೀಯ ಉಚಿತವಾಗಿ  ನೀಡಲಾಗುತ್ತಿದೆ.  ಈ ಶಿಬಿರದಲ್ಲಿ ಭಾಗವಹಿಸಿ ಪರಸ್ಥಳದ ಶಿಬಿರಾರ್ಥಿಗಳಿಗೆ ವಸತಿ ಸೌಲಭ್ಯ ಸಹ ಕಲ್ಪಿಸಲಾಗಿದೆ.    

ಈ ಶಿಬಿರದಲ್ಲಿ ನಡೆಯುವ ಪರೀಕ್ಷೆಯಲ್ಲಿ  ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮೂರು ಹಂತಗಳಲ್ಲಿ ನೀಡಲಾಗುತ್ತಿದೆ.  ಪರೀಕ್ಷೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ಇರುತ್ತದೆ.   

ಸಿದ್ದಚಕ್ರ ಆರಾಧನೆ: ಮುನಿಶ್ರೀ 108 ವಿಧಿತಸಾಗರಜಿ ಮಹಾರಾಜರ ಸಾನಿಧ್ಯದಲ್ಲಿ ಹಾವೇರಿ ನಗರದಲ್ಲಿ  ಮೊದಲಬಾರಿಗೆ  ಸಿದ್ಧಚಕ್ರ ಮಹಾಮಂಡಲ ಆರಾಧನೆ ದಿನಾಂಕ 12-12-2025 ರಿಂದ 20-12-2025ರವರೆಗೆ ಜರುಗಲಿದೆ. ಸಿದ್ಧಚಕ್ರ ಆರಾಧನೆಗೆ  ಅಗತ್ಯ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಪೂಜಾ, ಆಹಾರ, ವಸತಿ ಸೇರಿದಂತೆ  ವಿವಿಧ ಸಮಿತಿಗಳನ್ನು ರಚಿಸಿ, ಆಯಾ ಸಮಿತಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.  ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  

ಸಂಭ್ರವದ ದಶಲಕ್ಷಣ ಪರ್ವ ಆಚರಣೆ: ಮುನಿಶ್ರೀ 108 ವಿಧಿತಸಾಗರಜಿ ಮಹಾರಾಜರ ಸಾನಿಧ್ಯದಲ್ಲಿ ಹಾಗೂ ಅವರ ಮಾರ್ಗದರ್ಶನದಲ್ಲಿ  ದಶಲಕ್ಷಣ ಮಹಾಪರ್ವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೂಜಾ ಕಾರ್ಯಕ್ರಮಗಳು, ಮುನಿಗಳ ಪ್ರವಚನ, ಉಪನ್ಯಾಸ ಸೇರಿದಂತೆ ಸಂಜೆಯವರೆಗೆ ಕಾರ್ಯಕ್ರಮಗಳು ನಿರಂತರವಾಗಿ ಜರುಗಿದವು.   

ಮುನಿಗಳ ಚಾತುರ್ಮಾಸ ವಿವರ: ಮುನಿಶ್ರೀ 108 ವಿಧಿತಸಾಗರ ಮಹಾರಾಜರ ಸಾನಿಧ್ಯನದಲ್ಲಿ 2019ರಲ್ಲಿ ಮಧ್ಯ ಪ್ರದೇಶದ ಭೂಪಾಲ್,  2020ರಲ್ಲಿ ಉತ್ತರ ಪ್ರದೇಶದ ಲಲಿತಪುರ, 2021ರಲ್ಲಿ ಮಹಾರಾಷ್ಟ್ರದ ಚಂದೂರ ರೈಲ್ವೆ,  2022ರಲ್ಲಿ ಕರ್ನಾಟಕ ರಾಜ್ಯದ ಬೋರಗಾಂವ, 2023ರಲ್ಲಿ ಹಳಸಸಿ, 2024ರಲ್ಲಿ ಹಾರಿಕೆಯಲ್ಲಿ ಹಾಗೂ ಈಗ 2025 ರಲ್ಲಿ ಹಾವೇರಿ ನಗರದಲ್ಲಿ  7ನೇ ಚಾತುರ್ಮಾಸ ನಡೆಯುತ್ತಿದೆ.  

ಹಾವೇರಿಯ ಭಗವಾನ ಶ್ರೀ 1008 ನೇಮಿನಾಥ ದಿಗಬಂದ ಜೈನ ಮಂದಿರ ಕಮೀಟಿ, ರತ್ನತ್ರಯ ಮಹಿಳಾ ಸಮಾಜ ಹಾಗೂ ವಿವಿಧ ಸಮಿತಿಗಳ ಸಹಯೋಗದಲ್ಲಿ, ಮುನಿಗಳ ಸಾನಿಧ್ಯದಲ್ಲಿ ನಡೆಯುವ ಎಲ್ಲಾ ಧರ್ಮದ ಕಾರ್ಯಕ್ರಮದಲ್ಲಿ ಹಾವೇರಿ ಸೇರಿದಂತೆ ಸುತ್ತಮುತ್ತಲ ನಗರ, ಪಟ್ಟಣ, ಗ್ರಾಮಗಳ ಶ್ರಾವಕ, ಶ್ರಾವಕಿಯರು ಭಾಗಿಗಳಾಗಿ ಧರ್ಮದ ಲಾಭ ಪಡೆದುಕೊಳ್ಳುತ್ತಿದ್ದಾರೆ.