ಭಕ್ತರ ಅಭಿಪ್ರಾಯವೇ ಅಂತಿಮ: ಭಕ್ತರ ಸಭೆಯಲ್ಲಿ ಮಹತ್ವದ ನಿರ್ಣಯ

ಭಕ್ತರ ಅಭಿಪ್ರಾಯವೇ ಅಂತಿಮ: ಭಕ್ತರ ಸಭೆಯಲ್ಲಿ ಮಹತ್ವದ ನಿರ್ಣಯ Devotees' opinion is final: Significant decision at the meeting of devotees

ಲೋಕದರ್ಶನ ವರದಿ 

ಇಂಡಿ: ಲಚ್ಯಾಣ ಬಂಥನಾಳ ಪೀಠದ ಉತ್ತರಾಧಿಕಾರಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಲಚ್ಯಾಣದ ಸಿದ್ದು ಸರ ವಾಲಿ ಅವರ ತೋಟದಲ್ಲಿ ಸ್ವಾಭಿಮಾನಿ ಭಕ್ತರ ಬೃಹತ್ ಸಭೆ ನಡೆಯಿತು.  ಸುಮಾರು 500ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದ ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ಕುರಿತು ವ್ಯಾಪಕ ಚರ್ಚೆ ನಡೆಯಿತು.ಸಭೆಯಲ್ಲಿ ರಾಜ್ಯದ  ಸಚಿವರಾದ  ಎಂ. ಬಿ. ಪಾಟೀಲ ಅವರು ಶ್ರೀ ಸಿದ್ಧಲಿಂಗ ಸೇವಾ ಸಮಿತಿಯನ್ನು ಸಂಪರ್ಕಿಸಿ, ಬಂಥನಾಳ ಸ್ವಾಮೀಜಿಗಳು ಹಾಗೂ ಭಕ್ತರ ನಡುವೆ ರಾಜಿ ಸಂಧಾನಕ್ಕೆ ಪ್ರಯತ್ನ ನಡೆಸಲು ಒಂದು ವಾರದ ಕಾಲಾವಕಾಶ ನೀಡುವಂತೆ ಮನವಿ ಮಾಡಿರುವ ವಿಷಯವನ್ನು ಸದಸ್ಯರ ಗಮನಕ್ಕೆ ತರಲಾಯಿತು. ಈ ಕುರಿತು ನಡೆದ ಸುದೀರ್ಘ ಚರ್ಚೆಯ ಬಳಿಕ ಸಭೆಯಲ್ಲಿ ಭಾಗವಹಿಸಿದ್ದ ಭಕ್ತರು ಏಕಕಂಠದಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ರಾಜಿ ಸಂಧಾನಕ್ಕೆ ಒಪ್ಪಬಾರದು ಹಾಗೂ ಈಗಾಗಲೇ ಆಯ್ಕೆ ಮಾಡಿರುವ ವಿವಾದಿತ ಹಿನ್ನೆಲೆಯ ಉತ್ತರಾಧಿಕಾರಿಯನ್ನು ಅಂಗೀಕರಿಸಬಾರದು ಎಂದು ಭಕ್ತರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು. ಬಂಥನಾಳ ಶಿವಯೋಗಿಗಳು ಈ ಹಿಂದೆ ಘೋಷಿಸಿದ್ದ ಉತ್ತರಾಧಿಕಾರಿ ಆಯ್ಕೆ ಸಮಿತಿಯ ಮೂಲಕವೇ, ಸರ್ವಾನುಮತದ ಆಧಾರದ ಮೇಲೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕು ಎಂಬ ಒತ್ತಾಯವನ್ನು ಸಭೆ ಪುನರುಚ್ಚರಿಸಿತು.ಅಲ್ಲದೆ, ಮುಗಳಖೋಡದ ಪರಮ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಳಿಂಗಳಿಯ ಶಿವಾನಂದ ಮಹಾಸ್ವಾಮಿಗಳು, ಶಾಸಕ  ಯಶವಂತರಾಯಗೌಡ ಪಾಟೀಲ ಹಾಗೂ ಲಚ್ಯಾಣ ಸಿದ್ಧಲಿಂಗ ಮಹಾರಾಜರ ಅಪಾರ ಭಕ್ತವೃಂದವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆದಿರುವ ಉತ್ತರಾಧಿಕಾರಿ ಆಯ್ಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.