ಹೊಸಪೇಟೆಯಲ್ಲಿ ೮.೬೨ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಹೊಸಪೇಟೆಯಲ್ಲಿ ೮.೬೨ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ Development works worth ₹8.62 crore launched in Hosapete

ಹೊಸಪೇಟೆ ೨೪: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಶಿಕ್ಷಣ, ವಸತಿ ಹಾಗೂ ಕುಡಿಯುವ ನೀರಿನ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಒಟ್ಟು ೮.೬೨ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಎಚ್.ಆರ್. ಗವಿಯಪ್ಪ ಭಾನುವಾರ ಭೂಮಿಪೂಜೆ ನೆರವೇರಿಸಿದರು. 

ಜಂಬುನಾಥನಹಳ್ಳಿಯಲ್ಲಿ ೧೦೦ ವಿದ್ಯಾರ್ಥಿನಿಯರ ಸಾಮರ್ಥ್ಯದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ೪.೫೫ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಸುಮಾರು ೧೫೦ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ದೊರೆಯಲಿದೆ. 

ಅಮೃತ ನಗರೋತ್ಥಾನ ಯೋಜನೆಯಡಿ ಬಾಲಾಜಿ ನಗರದಲ್ಲಿ ೧೦ ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಗಾರ ಹಾಗೂ ೨೫೦ ಮಿ.ಮೀ. ವ್ಯಾಸದ ಡಿಐ ಪೈಪ್ಲೆöÊನ್ ಮೂಲಕ ನೀರು ಪೂರೈಸುವ ಕಾಮಗಾರಿಗೆ ೨.೦೩ ಕೋಟಿ ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿ ೧ರಿಂದ ೧.೫ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 

ಆಕಾಶವಾಣಿ ಬಡಾವಣೆಯ ಈಶ್ವರ ನಗರದಲ್ಲಿಯೂ ಮತ್ತೊಂದು ನೀರಿನ ಟ್ಯಾಂಕ್ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗವಿಯಪ್ಪ ತಿಳಿಸಿದರು. 

ಅಕ್ಟೋಬರ್ನಲ್ಲಿ ಜಿಲ್ಲಾಸ್ಪತ್ರೆ ಉದ್ಘಾಟನೆ 

ಹೊಸಪೇಟೆ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಶೇ.೪೦ರಿಂದ ೫೦ರಷ್ಟು ಉಪಕರಣಗಳು ಈಗಾಗಲೇ ಬಂದಿದ್ದು, ಉಳಿದ ಉಪಕರಣಗಳು ಹಾಗೂ ಪೀಠೋಪಕರಣಗಳ ಪೂರೈಕೆ ಸೆಪ್ಟೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ಅಗತ್ಯ ಸಿಬ್ಬಂದಿ ನೇಮಕಾತಿ ಆರಂಭವಾಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳಿAದ ಆಸ್ಪತ್ರೆ ಉದ್ಘಾಟಿಸುವ ಗುರಿ ಹೊಂದಲಾಗಿದೆ. 

ಹೆಚ್ಚುವರಿಯಾಗಿ ೨೦ ಕೋಟಿ ವೆಚ್ಚದಲ್ಲಿ ೧೦೦ ಹಾಸಿಗೆಗಳನ್ನು ಸೇರ್ಪಡೆಗೊಳಿಸಿ ಆಸ್ಪತ್ರೆಯನ್ನು ೪೦೦ ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸಲಾಗುವುದು. ನಗರ ಹಾಗೂ ಹೆರಿಗೆ ಆಸ್ಪತ್ರೆ ಸೇರಿದಂತೆ ಒಟ್ಟು ೬೦೦ಕ್ಕೂ ಹೆಚ್ಚು ಹಾಸಿಗೆಗಳ ಸೌಲಭ್ಯ ದೊರೆಯಲಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. 

ಸೆಪ್ಟೆಂಬರ್ನಲ್ಲಿ ತುಂಗಭದ್ರೆಗೆ ಬಾಗಿನ 

ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಭದ್ರಾ ಮತ್ತು ತುಂಗಾ ನದಿಗಳಿಂದ ಉತ್ತಮ ಒಳಹರಿವು ಇರುವುದರಿಂದ ಈ ವರ್ಷ ಎರಡನೇ ಬೆಳೆಗೆ ನೀರಿನ ಅಭಾವ ಎದುರಾಗುವುದಿಲ್ಲ ಎಂದು ಶಾಸಕ ಗವಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಂ. ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಪೌರಾಯುಕ್ತ ಎರಗುಡಿ ಶಿವಕುಮಾರ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.