ವಾಳಕಿ ಶಾಲೆಯ ಅಭಿವೃದ್ಧಿ ನಮ್ಮ ಆದ್ಯತೆ : ಶಾಸಕ ಗಣೇಶ ಹುಕ್ಕೇರಿ

ವಾಳಕಿ ಶಾಲೆಯ ಅಭಿವೃದ್ಧಿ ನಮ್ಮ ಆದ್ಯತೆ : ಶಾಸಕ ಗಣೇಶ ಹುಕ್ಕೇರಿ Development of Valaki School is our priority: MLA Ganesh Hukkeri

             ಚಿಕ್ಕೋಡಿ, 14 :  ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಮತ್ತು ಸಮಾನ ಅವಕಾಶದ ಶಿಕ್ಷಣ ಒದಗಿಸಲು ವಾಳಕಿ ಶಾಲೆಯ ಉನ್ನತೀಕರಣ ಅತ್ಯಂತ ಅಗತ್ಯವಾಗಿತ್ತು. ಈ ಪ್ರದೇಶದ ವಿದ್ಯಾರ್ಥಿಗಳು ಈಗ ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯಲಿದ್ದಾರೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ತಾಲೂಕಿನ ವಾಳಕಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣಗೊಂಡ ಹಿನ್ನೆಲೆಯಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರು ಅವರ ಜಯಂತಿ ನಿಮಿತ್ತವಾಗಿ ಪ್ರಥಮ ಬಾರಿಗೆ ಶುರುವಾಗಲಿರುವ  9 ನೇ ತರಗತಿಗೆ ಚಾಲನೆ ನೀಡಿದರು.  

                        ಪ್ರಥಮವಾಗಿ ಮಕ್ಕಳ ದಿನಾಚರಣೆ ಶುಭಾಷಯ ತಿಳಿಸಿ  ನಮ್ಮ ನಾಯಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ನಾನು ವಿಶೇಷ ಕಾಳಜಿ ವಹಿಸಿ ಈ ಶಾಲೆಯನ್ನು ಪ್ರೌಢ ಶಾಲೆ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಡಿಜಿಟಲ್ ಶಿಕ್ಷಣಕ್ಕೆ ಬಲ ನೀಡುವ ಉದ್ದೇಶದಿಂದ ನಮ್ಮ ಅನ್ನಪೂರ್ಣೇಶ್ವರಿ  ಫೌಂಡೇಶನ್ ವತಿಯಿಂದ 10 ಕಂಪೂಟರ್ ಗಳನ್ನು ನೀಡುತ್ತೇವೆ, ಶಾಲೆಗೆ 4 ನೂತನ ತರಗತಿ ಕೊಠಡಿಗಳ ಮಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸುತ್ತೇವೆ ಮತ್ತು ಕ್ಷೇತ್ರದ 5 ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಉನ್ನತ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಹೊರುತ್ತೇವೆಂದು ತಿಳಿಸಿದರು. ಈ ವೇಳೆ ಡಿಡಿಪಿಐ ಸೀತಾರಾಮನ್, ಬಿಇಒ ಪ್ರಭಾವತಿ ಪಾಟೀಲ, ಅಣ್ಣಾಸಾಹೇಬ ನಾಯಿಕ, ವಿನೋದ ಕಾಗೆ, ಸುಜಯ ಪಾಟೀಲ, ಸುಧಾಕರ ಮದರಖಂಡಿ, ಮಹಾದೇವ ಕವಲಾಪುರೆ, ರಾಹುಲ ಡೋನೆ, ಸಂತೋಷ ಖೋತ, ಸಿದ್ದಲಿಂಗ ಚಿಗರೆ ಸೇರಿದಂತೆ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪುಟ್ಟು ಮಕ್ಕಳು ಉಪಸ್ಥಿತರಿದ್ದರು.