ಪದವಿ ಜೊತೆಗೆ ಕೌಶಲ್ಯ ಬೆಳೆಸಿಕೊಂಡರೆ ಉದ್ಯೋಗಾವಕಾಶ ಹೆಚ್ಚಳ
Developing skills alongside a degree increases job opportunities
ಲೋಕದರ್ಶನ ವರದಿ
ನರೇಗಲ್ 21: ಪ್ರಸ್ತುತ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಕೇವಲ ಪದವಿ ಶಿಕ್ಷಣಕ್ಕೆ ಸೀಮಿತವಾಗದೆ, ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯ ಎಂದು ಗದಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ಉದ್ಯೋಗಾಧಿಕಾರಿ ಎಚ್.ಎಂ. ಬಡಿಗೇರ್ ಹೇಳಿದರು.
ನರೇಗಲ್‌ನ ಮರಿಯಪ್ಪ ಬಾಳಪ್ಪ ಕಳಕೊಂಡವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ವೃತ್ತಿ ಮಾರ್ಗದರ್ಶನ ಮತ್ತು ಯುವನಿಧಿ ಯೋಜನೆಯ ಸಂಚಾರಿ ನೋಂದಣಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ಎಸ್‌ಎಸ್‌ಸಿ ಹಾಗೂ ರೈಲ್ವೆ ಸೇರಿದಂತೆ ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಉತ್ತಮ ಅವಕಾಶಗಳಿವೆ.
ಇಂದಿನ ಡಿಜಿಟಲ್ ಯುಗದಲ್ಲಿ ಐಟಿ, ಹಣಕಾಸು, ಮಾರ್ಕೆಟಿಂಗ್, ಶಿಕ್ಷಣ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಪದವೀಧರರಿಗೆ ಹೆಚ್ಚಿನ ಬೇಡಿಕೆಯಿದ್ದು, ಡಿಜಿಟಲ್ ಕೌಶಲ್ಯ, ಸಂವಹನ ಕಲೆ ಮತ್ತು ವೃತ್ತಿಪರ ಪ್ರಮಾಣಪತ್ರಗಳನ್ನು ಪಡೆಯುವುದರಿಂದ ಉತ್ತಮ ಹುದ್ದೆಗಳನ್ನು ಪಡೆಯಬಹುದು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಕಸ್ತೂರೇವ್ವ ದಳವಾಯಿ ಮಾತನಾಡಿ, ಪಠ್ಯ ಶಿಕ್ಷಣದ ಜೊತೆಗೆ ವೃತ್ತಿಪರ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಸರ್ಕಾರದ ಸೌಲಭ್ಯಗಳನ್ನು ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.
ಗದಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ತರಬೇತುದಾರ ಆನಂದ ಹೊಂಬಳ ಅವರು ಯುವನಿಧಿ ಯೋಜನೆಯ ಸೌಲಭ್ಯಗಳು, ಅರ್ಹತಾ ಮಾನದಂಡಗಳು ಹಾಗೂ ನೋಂದಣಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಉದ್ಯೋಗ ಮತ್ತು ತರಬೇತಿ ಕೋಶದ ಸಂಯೋಜಕ ಶಿವಪ್ಪ ಕುರಬರ ಮಾತನಾಡಿ, ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಇಬ್ಬರು ಬಿಸಿಎ ವಿದ್ಯಾರ್ಥಿಗಳು ಪುಣೆಯ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಉದ್ಯೋಗ ಪಡೆದಿದ್ದು, ನಾಲ್ವರು ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಯುವನಿಧಿ ಯೋಜನೆಯ ಉಚಿತ ನೋಂದಣಿ ಮಾಡಿಸಲಾಯಿತು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿಗಳನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಜಯಶ್ರೀ ಮುತಗಾರ್, ಪ್ರಾಧ್ಯಾಪಕರಾದ ಎಸ್.ಎಸ್. ಸೂಡಿ, ಸುನಂದಾ ಮುಂಜಿ, ಅನಿಲಕುಮಾರ್, ವಿರೂಪಾಕ್ಷ ಆರ್., ಅಯ್ಯಪ್ಪ, ವಿ.ಸಿ. ಇಲ್ಲೂರ, ಕೆ.ಎನ್. ಕಟ್ಟಿಮನಿ, ವಿವೇಕಾನಂದ ಹಿರೇಮಠ, ಶರಣಪ್ಪ ಚಿಕ್ಕನಕೋಪ್ಪ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 